ಮುಂಬಯಿ: ಸಂದೀಪ್ ರೆಡ್ಡಿ ವಂಗಾ ಅವರ ʼಅನಿಮಲ್ʼ ದೊಡ್ಡ ಹಿಟ್ ಆಗುವುದರ ಜೊತೆಗೆ ಸಿನಿಮಾದ ಬಗ್ಗೆ ಒಂದಷ್ಟು ನೆಗೆಟಿವ್ ಅಭಿಪ್ರಾಯಗಳು ಹಲವರಿಂದ ಕೇಳಿಬಂದಿದೆ. ಆದರೆ ಇದೆಲ್ಲವನ್ನು ಮೀರಿ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಯಶಸ್ಸು ಕಂಡಿದೆ.
ರಣ್ಬೀರ್ ಕಪೂರ್ ಅವರ ʼಅನಿಮಲ್ʼ ಸಿನಿಮಾದಲ್ಲಿ ರಕ್ತಸಿಕ್ತ ಅಂಶ ಹಾಗೂ ಹಸಿಬಿಸಿ ದೃಶ್ಯವನ್ನು ತುಸು ಹೆಚ್ಚಾಗಿಯೇ ತೋರಿಸಲಾಗಿದೆ. ಪುರುಷ ಪ್ರಧಾನವೇ ಮೇಲು ಎನ್ನುವ ಮತ್ತೊಂದು ವಿಚಾರವನ್ನು ಕೂಡ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಕಾರಣದಿಂದ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕಂಗನಾ ರಣಾವತ್ ಅವರ ಬಳಿ ಅಭಿಮಾನಿಯೊಬ್ಬ ʼತೇಜಸ್ʼ ಸಿನಿಮಾ ಯಾಕೆ ಓಡಿಲ್ಲ ಎನ್ನುವ ಪ್ರಶ್ನೆಯೊಂದನ್ನು ಎಕ್ಸ್ ನಲ್ಲಿ ಕೇಳಿದ್ದ. ಇದಕ್ಕೆ ಕಂಗನಾ ಅವರು ಸಿನಿಮಾದ ಹೆಸರು ಹೇಳದೆ, “ನನ್ನ ಸಿನಿಮಾಗಳ ಬಗ್ಗೆ ನಕಾರಾತ್ಮಕತೆಯನ್ನು ಹಬ್ಬಿಸುವುದು ಹೆಚ್ಚಾಗಿದೆ. ನಾನು ಇದುವರೆಗೆಕಠಿಣ ಹೋರಾಟ ನಡೆಸಿದ್ದೇನೆ. ಆದರೆ ಪ್ರೇಕ್ಷಕರು ಕೂಡ ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ಪರಿಗಣಿಸುವ ಮತ್ತು ಶೂಗಳನ್ನು ನೆಕ್ಕಲು ಕೇಳುವ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ವಿಚಾರದ ಮೇಲೆ ಸಿನಿಮಾಗಳನ್ನು ಮಾಡಲು ವೃತ್ತಿ ಜೀವನವನ್ನು ಮುಡಿಪಾಗಿಸುವವರಿಗೆ ಪ್ರೋತ್ಸಾಹ ಸಿಗದೆ ಇರುವುದು ದುರಂತ” ಎಂದು ಕಂಗನಾ ಪ್ರತಿಕ್ರಿಯೆ ನೀಡಿದ್ದರು.
ಇದು ಪರೋಕ್ಷವಾಗಿ ʼಅನಿಮಲ್ʼ ಸಿನಿಮಾಕ್ಕೆ ಹೇಳಿದ ಮಾತಾಗಿತ್ತು. ಇದೇ ವಿಚಾರವಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದೀಪ್ ವಂಗಾ ಅವರು, ಕಂಗನಾ ಜೊತೆ ಕೆಲಸ ಮಾಡುವ ಬಗ್ಗೆ ಹೇಳಿದ್ದರು. ಅವರು ಒಪ್ಪಿದರೆ ಅವರೊಂದಿಗೆ ಕೆಲಸ ಮಾಡುವ ಇಚ್ಛೀಸುತ್ತೇನೆ ಎಂದಿದ್ದರು.
“ವಿಮರ್ಶೆ ಮತ್ತು ಟೀಕೆ ಒಂದೇ ಅಲ್ಲ, ಪ್ರತಿಯೊಂದು ರೀತಿಯ ಕಲೆಯನ್ನು ವಿಮರ್ಶೆ ಮತ್ತು ಚರ್ಚೆ ಮಾಡಬೇಕು, ಇದು ಸಾಮಾನ್ಯ ವಿಷಯ. ನನ್ನ ವಿಮರ್ಶೆಗೆ ಮುಗುಳ್ನಗುವ ಮೂಲಕ ಸಂದೀಪ್ ಜಿ ನನ್ನ ಬಗ್ಗೆ ಗೌರವವನ್ನು ತೋರಿದ ರೀತಿ ಹಾಗೂ ಅವರ ವರ್ತನೆ ಕೂಡ ಅವರು ಮಾಡುವ ಪುರುಷ ಪ್ರಧಾನ ಸಿನಿಮಾದಂತೆಯೇ ಇತ್ತು. ಆದರೆ ದಯವಿಟ್ಟು ನನಗೆ ಯಾವುದೇ ಪಾತ್ರವನ್ನು ನೀಡಬೇಡಿ. ಇಲ್ಲದಿದ್ದರೆ ನಿಮ್ಮ ಆಲ್ಫಾ ಪುರುಷ ನಾಯಕರು ಸ್ತ್ರೀವಾದಿಗಳಾಗುತ್ತಾರೆ ಮತ್ತು ನಂತರ ನಿಮ್ಮ ಚಲನಚಿತ್ರಗಳು ಸಹ ಸೋಲಿಸಲ್ಪಡುತ್ತವೆ. ನೀವು ಬ್ಲಾಕ್‌ಬಸ್ಟರ್‌ಗಳನ್ನು ಮಾಡುತ್ತೀರಿ, ಚಿತ್ರರಂಗಕ್ಕೆ ನಿಮ್ಮ ಅಗತ್ಯವಿದೆ” ಎಂದು ಹೇಳಿದ್ದಾರೆ.
ʼಅನಿಮಲ್ʼ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ಇತರರು ನಟಿಸಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿದೆ.