ಬಾಲ್ಯದ ಸ್ನೇಹಿತರ ಕುರಿತಾಗಿ ಸಾಕಷ್ಟು ಸಿನಿಮಾಗಳು ಬಂದಿವೆ. ಪ್ರತಿ ಸಿನಿಮಾಗಳು ಕೂಡಾ ಒಂದೊಂದು ವಿಭಿನ್ನ ಕಥೆಯನ್ನು ಹೇಳಿವೆ. ಈ ವಾರ ತೆರೆಕಂಡಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಕೂಡಾ ಸ್ನೇಹದ ಸುತ್ತ ಸಾಗುವ ಸಿನಿಮಾ. ಮೂವರು ವಿಭಿನ್ನ ಮನಸ್ಥಿತಿಯ, ಚಿಂತನೆಯ ಒಟ್ಟಾಗಿ, ಸ್ನೇಹಿತರಾದಾಗ ಮುಂದೆ ಏನೇನು ನಡೆಯುತ್ತದೆ, ಅವರ ಸ್ನೇಹ ಎಂಥದ್ದು ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಮುಖ್ಯವಾಗಿ ಈ ಸಿನಿಮಾವನ್ನು ನಿರ್ದೇಶಕರು ಮೂರು ವಯೋಮಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಬಾಲ್ಯ,ಹರೆಯ, ಮಧ್ಯ… ಈ ಮೂರು ವಯೋಮಾನವನ್ನು ಸಿನಿಮಾದಲ್ಲಿ ತೋರಿಸಿರುವುದರಿಂದ ಬಹುತೇಕ ಚಿತ್ರ ಫ್ಲ್ಯಾಶ್‌ಬ್ಯಾಕ್‌ನಲ್ಲೇ ಸಾಗುತ್ತದೆ.
ಒಬ್ಬ ಸ್ನೇಹಿತನ ಕಥೆಯನ್ನು, ಇನ್ನೊಬ್ಬ ಸ್ನೇಹಿತನ ಬಾಯಿಂದ ನಿರ್ದೇಶಕರು ಹೇಳಿಸುತ್ತಾ ಸಿನಿಮಾವನ್ನು ಮುಂದುವರೆಸುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಕುತೂಹಲ ಹಾಗೂ ಗೊಂದಲ ಎರಡೂ ಒಟ್ಟೊಟ್ಟಿಗೆ ಸಾಗುತ್ತದೆ. ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಿನಿಮಾ ಏಕಾಏಕಿ ಬ್ಯಾಂಕಾಕ್‌ಗೆ ಶಿಫ್ಟ್ ಆಗುತ್ತದೆ. ಈ ಮೂಲಕ ಬ್ಯಾಂಕಾಕ್‌ನ ಬೀದಿಗಳಲ್ಲಿ ಮೂವರು ಸ್ನೇಹಿತರ ಮೋಜು- ಮಸ್ತಿ ಸಾಗುತ್ತದೆ. ಇದರ ನಡುವೆಯೇ ಅವರ ಮುಖದಲ್ಲೊಂದು ಭಯ… ಅಷ್ಟಕ್ಕೂ ಆ ಭಯಕ್ಕೆ ಕಾರಣವೇನು… ಅದೇ ಸಿನಿಮಾದ ಸಸ್ಪೆನ್ಸ್ ಪಾಯಿಂಟ್.
ಮನರಂಜನೆಯ ಜೊತೆಗೆ ಚಿತ್ರದಲ್ಲಿ ಸಂದೇಶಕ್ಕೂ ಹೆಚ್ಚಿನ ಜಾಗವಿದೆ. ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ, ಪಾಸಿಟಿವ್ ಯೋಚನೆಯಲ್ಲಿ ಬದುಕಿ.. ಹೀಗೆ ಹಲವು ಸಂದೇಶಗಳನ್ನು ಮನರಂಜನೆಯ ಜೊತೆಗೆ ನೀಡಲಾಗಿದೆ. “ಕಾಣೆಯಾದವರ ಬಗ್ಗೆ ಪ್ರಕಟಣೆ’ ಒಂದು ಪ್ರಯತ್ನವಾಗಿ ಇಷ್ಟವಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳನ್ನು ಬದಿಗಿಟ್ಟು ನೋಡಬಹುದು.
ಚಿತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲ ನಾಣಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಆಶಿಕಾ ಇದ್ದಷ್ಟು ಹೊತ್ತು ಚೆಂದ. ನಿರ್ದೇಶಕ ಅನಿಲ್ ಸಿಕ್ಕ ಸ್ಕ್ರೀನ್‌ಸ್ಪೆಸ್ ಅನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ರವಿ ರೈ