ಲಂಡನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜೂನ್ 18ರಂದು ಆರಂಭವಾಗುವು ಈ ಪಂದ್ಯದಲ್ಲಿ ಸೆಣಸಾಡಲಿದೆ. ಇಂಗ್ಲೆಂಡ್ ನ ಸೌಥಂಪ್ಟನ್ ನಲ್ಲಿ ನಡೆಯುವ ಪಂದ್ಯಕ್ಕೆ ಕ್ರಿಕೆಟ್ ವಿಶ್ವ ಎದುರು ನೋಡುತ್ತಿದೆ.
ಬಹುನಿರೀಕ್ಷೆಯ ಪಂದ್ಯದ ಬಗ್ಗೆ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿದ್ದಾರೆ. ಐಸಿಸಿ ವೆಬ್ ಸೈಟ್ ಜೊತೆಗೆ ಮಾತನಾಡಿದ ಕೇನ್ ವಿಲಿಯಮ್ಸನ್, ಭಾರತದ ಬೌಲಿಂಗ್ ವಿಭಾಗ ಶ್ರೇಷ್ಠ ಮಟ್ಟದಲ್ಲಿದೆ. ಸ್ಪಿನ್ ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿದೆ ಎಂದಿದ್ದಾರೆ.
“ಅವರು (ಭಾರತ) ಉತ್ತಮ ತಂಡವನ್ನು ಹೊಂದಿದ್ದಾರೆ. ಶ್ರೇಷ್ಠ ತಂಡವದು. ಆಸ್ಟ್ರೇಲಿಯಾದಲ್ಲಿ ಅವರು ತೋರಿದ ಪ್ರದರ್ಶನವನ್ನ ನಾವೆಲ್ಲಾ ಕಂಡಿದ್ದೇವೆ” ಎಂದು ವಿಲಿಯಮ್ಸನ್ ಹೇಳಿದ್ದಾರೆ.
ಇದನ್ನೂ ಓದಿ:ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ
ಭಾರತದ ವೇಗದ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮುಂತಾದವರಿದ್ದರೆ, ಸ್ಪಿನ್ ವಿಭಾಗದಲ್ಲಿ ರವಿ ಅಶ್ವಿನ್, ರವಿ ಜಡೇಜಾ, ಅಕ್ಷರ್ ಪಟೇಲ್ ಪ್ರಮುಖರು.
ಅಂದಹಾಗೆ ಕಿವೀಸ್ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್ ನ್ಯೂಜಿಲ್ಯಾಂಡ್ ತಂಡದ ಬೌಲಿಂಗ್ ಅಸ್ತ್ರಗಳು.