Advertisement
ಶನಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 7 ವಿಕೆಟಿಗೆ 315 ರನ್ ಪೇರಿಸಿ ಸವಾಲೊಡ್ಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ತೀವ್ರ ಕುಸಿತಕ್ಕೆ ಸಿಲುಕಿದ ಪಾಕಿಸ್ಥಾನ 30.1 ಓವರ್‌ಗಳಲ್ಲಿ 6 ವಿಕೆಟಿಗೆ 166 ರನ್ ಮಾಡಿದ ವೇಳೆ ಸುರಿದ ಮಳೆಯಿಂದ ಆಟವೇ ಸ್ಥಗಿತಗೊಂಡಿತು. ಆಗ ಡಕ್‌ವರ್ತ್-ಲೂಯಿಸ್ ನಿಯಮದಂತೆ ಪಾಕಿಸ್ಥಾನ 61 ರನ್ನುಗಳ ಹಿನ್ನಡೆಯಲ್ಲಿತ್ತು. ಇದರೊಂದಿಗೆ ನ್ಯೂಜಿಲ್ಯಾಂಡ್ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ದ್ವಿತೀಯ ಪಂದ್ಯ ಜ. 9ರಂದು ನೆಲ್ಸನ್‌ನಲ್ಲಿ ನಡೆಯಲಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆತಿಥೇಯ ಕಿವೀಸ್ ಇದರ ಭರಪೂರ ಲಾಭವೆತ್ತಿತು. ಮೊಹಮ್ಮದ್ ಆಮಿರ್, ರುಮ್ಮನ್ ರಯೀಸ್ ಹಾಗೂ ಹಸನ್ ಅಲಿ ದಾಳಿಯನ್ನು ಪುಡಿಗುಟ್ಟುತ್ತಲೇ ಸಾಗಿತು. ಮಾರ್ಟಿನ್ ಗಪ್ಟಿಲ್ (48)-ಕಾಲಿನ್ ಮುನ್ರೊ (58) ಜೋಡಿಯಿಂದ ಮೊದಲ ವಿಕೆಟಿಗೆ 12.3 ಓವರ್‌ಗಳಿಂದ 83 ರನ್ ಒಟ್ಟುಗೂಡಿತು. ಅನಂತರ ಕ್ರೀಸ್ ಇಳಿದ ಕಪ್ತಾನ ಕೇನ್ ವಿಲಿಯಮ್ಸನ್ 48ನೇ ಓವರ್ ತನಕ ಪ್ರವಾಸಿಗರನ್ನು ಚೆಂಡಾಡುತ್ತ ಶತಕ ಸಂಭ್ರಮವನ್ನಾಚರಿಸಿದರು. ಕೊನೆಯಲ್ಲಿ ಹೆನ್ರಿ ನಿಕೋಲ್ಸ್ ಬಿರುಸಿನ ಆಟಕ್ಕಿಳಿದು ಭರ್ತಿ 50 ರನ್ನುಗಳ ಕೊಡುಗೆ ಸಲ್ಲಿಸಿದರು. ಈ ನಾಲ್ವರ ಸಾಹಸದಿಂದ ಕಿವೀಸ್ ಸ್ಕೋರ್ ಮುನ್ನೂರರ ಗಡಿ ದಾಟಿತು. ವಿಲಿಯಮ್ಸನ್ 117 ಎಸೆತಗಳನ್ನು ನಿಭಾಯಿಸಿ 115 ರನ್ ಬಾರಿಸಿದರು. ಇದು 119ನೇ ಏಕದಿನದಲ್ಲಿ ವಿಲಿಯಮ್ಸನ್ ಹೊಡೆದ 10ನೇ ಶತಕ. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ವಿಲಿಯಮ್ಸನ್ 26 ರನ್ ಮಾಡಿದ ವೇಳೆ ಕೀಪರ್ ಸಫìರಾಜ್ ಕ್ಯಾಚ್ ಬಿಟ್ಟದ್ದು ಪಾಕಿಗೆ ದುಬಾರಿಯಾಗಿ ಪರಿಣಮಿಸಿತು. ಟಯ್ಲರ್ (12), ಲ್ಯಾಥಂ (3), ಸ್ಯಾಂಟ್ನರ್ (7) ಬೇಗನೇ ಆಟ ಮುಗಿಸಿದರು.
Related Articles
ಪಾಕ್ ಸರದಿಯಲ್ಲಿ ಮಿಂಚಿದ್ದು ಆರಂಭಕಾರ ಫಕರ್ ಜಮಾನ್ ಮಾತ್ರ. ಒಂದು ತುದಿಯಲ್ಲಿ ಕ್ರೀಸಿಗೆ ಅಂಟಿಕೊಂಡು ನಿಂತ ಜಮಾನ್ 86 ಎಸೆತಗಳಿಂದ 82 ರನ್ ಬಾರಿಸಿ ಔಟಾಗದೆ ಉಳಿದರು (5 ಬೌಂಡರಿ, 4 ಸಿಕ್ಸರ್). ಕಿವೀಸ್ ವೇಗಿಗಳಾದ ಸೌಥಿ 3, ಬೌಲ್ಟ್ 2 ವಿಕೆಟ್ ಉರುಳಿಸಿ ಪಾಕಿಗೆ ಘಾತಕವಾಗಿ ಪರಿಣಮಿಸಿದರು. ಪಾಕ್ ಆರಂಭದಲ್ಲಿ 13ಕ್ಕೆ 3, ಬಳಿಕ 54ಕ್ಕೆ 5 ವಿಕೆಟ್ ಕಳೆದುಕೊಂಡು ತೀರಾ ಸಂಕಟದಲ್ಲಿತ್ತು. 6ನೇ ವಿಕೆಟಿಗೆ ಜತೆಗೂಡಿದ ಜಮಾನ್-ಶಾದಾಬ್ ಖಾನ್ (28) 78 ರನ್ ಜತೆಯಾಟದ ಮೂಲಕ ಕುಸಿತಕ್ಕೆ ತಡೆಯಾದರು. ಬಳಿಕ ಮಳೆಯಾಟ ಮೊದಲ್ಗೊಂಡಿತು.
Advertisement
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-50 ಓವರ್‌ಗಳಲ್ಲಿ 7 ವಿಕೆಟಿಗೆ 315 (ವಿಲಿಯಮ್ಸನ್ 115, ಮುನ್ರೊ 58, ನಿಕೋಲ್ಸ್ 50, ಗಪ್ಟಿಲ್ 48, ಹಸನ್ ಅಲಿ 61ಕ್ಕೆ 3). ಪಾಕಿಸ್ಥಾನ-30.1 ಓವರ್‌ಗಳಲ್ಲಿ 6 ವಿಕೆಟಿಗೆ 166 (ಜಮಾನ್ 82, ಶಾದಾಬ್ 28, ಸೌಥಿ 22ಕ್ಕೆ 3, ಬೌಲ್ಟ್ 35ಕ್ಕೆ 2).
ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್.