Advertisement

ಇನ್ನೂ ದುರಸ್ತಿ ಕಾಣದ ಕಂಡ್ಲೂರು –ಅಂಪಾರು ರಾಜ್ಯ ಹೆದ್ದಾರಿ

10:03 AM Nov 06, 2018 | Team Udayavani |

ಕಂಡ್ಲೂರು: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಬೆಸೆಯುವ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರನಿಂದ ಅಂಪಾರಿಗೆ ಹೋಗುವ ರಸ್ತೆಯ ಅಲ್ಲಲ್ಲಿ ಹೊಂಡ – ಗುಂಡಿಗಳನ್ನು ಮುಚ್ಚುವ ಕಾರ್ಯ ಇನ್ನೂ ಆಗಿಲ್ಲ.
 
ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಆರಂಭಗೊಂಡು ದೂಪದಕಟ್ಟೆ, ಮುಳ್ಳುಗುಡ್ಡೆ, ನೆಲ್ಲಿಕಟ್ಟೆ, ಅಂಪಾರುವರೆಗಿನ ಸುಮಾರು 5 ಕಿ.ಮೀ. ದೂರದ ರಸ್ತೆ ಯುದ್ದಕ್ಕೂ ಅನೇಕ ಕಡೆಗಳಲ್ಲಿ ದೊಡ್ಡ – ದೊಡ್ಡ ಹೊಂಡಗಳಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಮಂದಿ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. 

Advertisement

ಕುಂದಾಪುರದಿಂದ ಸಿದ್ದಾಪುರ, ಹೊಸಂಗಡಿ ಮಾರ್ಗವಾಗಿ ಬಾಳೆಬರೆ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ –  52 ಇದಾಗಿದೆ. ನಿತ್ಯ ಸಾವಿರಕ್ಕೂ ಹೆಚ್ಚು  ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ದಿನಂಪ್ರತಿ ನೂರಾರು  ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು ಇದೇ ರಸ್ತೆ ಯನ್ನು ಅವಲಂಬಿಸಿವೆ. 

ಶೀಘ್ರ ದುರಸ್ತಿಗೆ ಮುಂದಾಗಲಿ
ಕುಂದಾಪುರದಿಂದ ಬಸ್ರುರೂ, ಬಳ್ಕೂರುವರೆಗೆ ರಸ್ತೆ ಉತ್ತಮವಾಗಿದ್ದು ಕಂಡ್ಲೂರಿನಿಂದ ಈಚೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಆದರೆ ಸಂಚಾರ ಮಾತ್ರ ಅನಿವಾರ್ಯವಾಗಿದೆ. ದೂಪದಕಟ್ಟೆ ಬಳಿಯಂತೂ ಪ್ರತೀ ವರ್ಷ ಹದಗೆಡುತ್ತದೆ.  ಘನ ವಾಹನಗಳ ಸಂಚಾರದಿಂದ ಈ ರಸ್ತೆ ಮತ್ತಷ್ಟು ಹಾಳಾಗಿದೆ. ಇನ್ನಾದರೂ ಈ ರಸ್ತೆಯ ದುರಸ್ತಿ ಬಗ್ಗೆ ಗಮನಹರಿಸಲಿ ಎಂದು ಕಂಡ್ಲೂರು, ದೂಪದಕಟ್ಟೆ ಭಾಗದ ಸ್ಥಳೀಯರು ಆಗ್ರಹಿಸಿದ್ದಾರೆ.

ಭರವಸೆ ಈಡೇರಿಲ್ಲ 
ಈ ಹದಗೆಟ್ಟ ರಾಜ್ಯ ಹೆದ್ದಾರಿಯ ಬಗ್ಗೆ ಉದಯವಾಣಿ ಕಳೆದ ಆ. 30 ರಂದು ವಿಸ್ತೃತ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಆಗ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಳೆಗಾಲ ಮುಗಿದ ತತ್‌ಕ್ಷಣ ಮರು ಡಾಮರು ಮಾಡಲಾಗುವುದು ಎನ್ನುವ ಭರವಸೆ ನೀಡಿದ್ದರು. ಅದಾಗಿ 3 ತಿಂಗಳು ಕಳೆಯುತ್ತ ಬಂದರೂ, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. 

 ಶೀಘ್ರ ಮರು ಡಾಮರು
ಕಳೆದ ವರ್ಷ ಈ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಅವರು ಮರು ಡಾಮರು  ಮಾಡಿ, ನಮಗೆ ಹಸ್ತಾಂತರಿಸುತ್ತಾರೆ. ಸಿಆರ್‌ಎಫ್‌ ಅನುದಾನದಡಿ ಈ ರಾಜ್ಯ ಹೆದ್ದಾರಿಯ ಮರು ಡಾಮರು  ಶೀಘ್ರ ಆಗಬಹುದು. 
ಚಂದ್ರಶೇಖರ್‌ ಕೆ.ಎಸ್‌. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next