ಮುಂಬಯಿ: ಸುಮಾರು 14 ಲಕ್ಷ ಕನ್ನಡಿಗರು ನೆಲೆಸಿರುವ ನಗರದಲ್ಲಿ ಸಂಘಟನೆಯ ಮೂಲಕ ಕನ್ನಡ ನಾಡು-ನುಡಿಗೆ ಹಲವಾರು ಸಂಸ್ಥೆಗಳು ವಿಶೇಷ ಕೊಡುಗೆಯನ್ನು ನೀಡುತ್ತಿವೆ. ಹಿರಿಯರ ಮಾರ್ಗ ದರ್ಶನದಿಂದ ಕಾಂದಿವಲಿ ಕನ್ನಡ ಸಂಘವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಇದನ್ನು ಇನ್ನಷ್ಟು ಬಲಿಷ್ಠ ಸಂಘಟನೆಯನ್ನಾಗಿ ಮಾಡುವ ಕೆಲಸ ನಮ್ಮದಾಗಬೇಕು. ಈ ದಿಸೆಯಲ್ಲಿ ಸಂಘದ ಹಿರಿಯರು ನೀಡಿದ ಸಹಕಾರ ಸಂಘವು ಈ ಮಟ್ಟಕ್ಕೆ ತಲು ಪಲು ಕಾರಣವಾಗಿದೆ. ತುಳು-ಕನ್ನಡ, ಸಂಸ್ಕೃತಿಯನ್ನು ಉಳಿಸಿ-ಬೆಲೆಸುವಲ್ಲಿ ಸದಸ್ಯರೆಲ್ಲರ ಸಹಕಾರ ಅಗತ್ಯವಾಗಿದೆ. ನಾವೆಲ್ಲರು ಸಂಸ್ಥೆಯನ್ನು ಇನ್ನಷ್ಟು ಸಾಧನೆಯತ್ತ ಕೊಂಡೊಯ್ಯೋಣ ಎಂದು ಪೊಲ್ಯ ಜಯಪಾಲ ಶೆಟ್ಟಿ ಅವರು ನುಡಿದರು.
ಸೆ. 10 ರಂದು ಕಾಂದಿವಲಿ ಮಹಾವೀರ ನಗರದ ಪಾಂಚೋಲಿಯಾ ಶಾಲಾ ಸಭಾಗೃಹದಲ್ಲಿ ಜರಗಿದ ಕಾಂದಿವಲಿ ಕನ್ನಡ ಸಂಘದ 23 ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಸಂಘದ ನೂತನ ಪುನರಾಭಿವೃದ್ಧಿ ಕಚೇರಿಯಲ್ಲಿ ಕಾಲಾನುಕಾಲಕ್ಕೆ ಖರ್ಚುವೆಚ್ಚಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸಂಘದಲ್ಲಿ ನೂತನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿ, ಸಂಘಕ್ಕೆ ಬೆನ್ನೆಲುಬಾಗಿ ನಿಂತರೆ, ಸಂಘವು ಎಲ್ಲಾ ವಿಧದಿಂದ ಯಶಸ್ವಿಯಾಗಲು ಸಾಧ್ಯವಿದೆ ಎಂದು ನುಡಿದರು.
ಮಹಾಸಭೆಯ ಪ್ರಾರಂಭದಲ್ಲಿ ಜೊತೆ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ ಮತ್ತು ಬಳಗದವರು ಪ್ರಾರ್ಥನೆಗೈದರು. ಅಧ್ಯಕ್ಷ ಪೊಲ್ಯ ಜಯಪಾಲ ಶೆಟ್ಟಿ ಸ್ವಾಗತಿಸಿದರು. ಗತ ವಾರ್ಷಿಕ ವರದಿಯನ್ನು ಮಂಡಿಸಿದ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ ಅವರು ಮಾತನಾಡಿ, ಭವಿಷ್ಯದಲ್ಲಿ ನೂತನ ಕಟ್ಟಡದಲ್ಲಿ ಸ್ಥಾಪನೆಗೊಳ್ಳುವ ಕಾಂದಿವಲಿ ಕನ್ನಡ ಸಂಘಕ್ಕೆ ನೂತನ ಯುವಜನರು ಆಸಕ್ತಿ ವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾನಿಧಿ ಪಡೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಸಹಾಯಕ್ಕೆ ಮಹತ್ವ ನೀಡಬೇಕು. ಕಾಂದಿವಲಿ ಪ್ರದೇಶದಲ್ಲಿ ಕಾಂದಿವಲಿ ಕನ್ನಡ ಸಂಘದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಸಂಘವನ್ನು ನಾವು ಬೆಳೆಸಬೇಕು ಎಂದರು.
2016-2017 ನೇ ಕಾರ್ಯಕಾರಿ ಸಮಿತಿಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯನ್ನು ಅಂಗೀಕರಿಸಲಾಯಿತು. 2017-2018 ಸಾಲಿನ ಲೆಕ್ಕ ಪರಿಶೋಧಕರಾಗಿ ಜಯಕರ ಕುಕ್ಯಾನ್ ಅವರನ್ನು ನೇಮಿಸಲಾಯಿತು. ಸಭಿಕರ ಪರವಾಗಿ ಸಲಹೆಗಾರ ಮಂಜಯ್ಯ ಸಿ. ಅಮೀನ್ ಅವರು ಮಾತನಾಡಿ, ಸಂಘದಲ್ಲಿ ಮಹಿಳೆಯರ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಬೆಂಬಲಿಸಬೇಕು. ವಿದ್ಯಾನಿಧಿ ಯೋಜನೆ ಇನ್ನಷ್ಟು ವಿಸ್ತಾರವಾಗಿ ಮತ್ತು ಸಮರ್ಪಕವಾಗಿ ಜಾರಿಯಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಜಿ. ಟಿ. ಪೂಜಾರಿ, ಉಪಾಧ್ಯಕ್ಷ ಪ್ರೇಮನಾಥ್ ಪಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಸುಂದರ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಾ ಎನ್. ಶೆಟ್ಟಿ ಅವರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಉಮೇಶ್ ಸುರತ್ಕಲ್ ವಂದಿಸಿದರು. ಮಹಾಸಭೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ