Advertisement

ಕಡಬ: ಹೊಸಮಠ ಮುಳುಗು ಸೇತುವೆಗೆ ಕಿಂಡಿ ಅಣೆಕಟ್ಟು

11:13 PM Jul 27, 2019 | Team Udayavani |

ಕಡಬ: ಇಲ್ಲಿನ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಳೆಯ ಮುಳುಗು ಸೇತುವೆಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ಸಾಧ್ಯತೆಗಳ ಕುರಿತು ಚರ್ಚೆ ಆರಂಭವಾಗಿದೆ. ಈಗಾಗಲೇ ಕುಟ್ರಾಪ್ಪಾಡಿ ಗ್ರಾ.ಪಂ. ವತಿಯಿಂದ ಈ ಕುರಿತು ಸರಕಾರಕ್ಕೆ ಮನವಿ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

Advertisement

ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಕಡಬ ಸಮೀಪ ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹೊಸಮಠ ಮುಳುಗು ಸೇತುವೆ ಕಳೆದ ವರ್ಷದ ತನಕ ಮಳೆಗಾಲದಲ್ಲಿ ನೆರೆನೀರಿನಲ್ಲಿ ಮುಳುಗುವ ಮೂಲಕ ಸದಾ ಸುದ್ದಿಯಲ್ಲಿರುತ್ತಿತ್ತು. ಆದರೆ ಈ ವರ್ಷದ ಮಳೆಗಾಲಕ್ಕೆ ಅಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಸರ್ವಋತು ಸೇತುವೆ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಮೂಲಕ ಹಳೆಯ ಮುಳುಗು ಸೇತುವೆ ಉಪಯೋಗ ಇಲ್ಲದಂತಾಗಿದೆ. ಸುಮಾರು 5 ದಶಕಗಳ ಹಿಂದೆ ಮೈಸೂರು ಸರಕಾರದ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ ಈ ಮುಳುಗು ಸೇತುವೆ ಇನ್ನೂ ಸದೃಢವಾಗಿರುವುದರಿಂದ ಅದನ್ನು ಕಿಂಡಿ ಅಣೆಕಟ್ಟಾಗಿ ಮಾರ್ಪಾಟು ಮಾಡಿ ಪರಿಸರದ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬಳಸಬಹುದು ಎನ್ನುವುದು ಗ್ರಾ.ಪಂ. ಆಡಳಿತದ ಆಲೋಚನೆ.

ಅಂತರ್ಜಲ ಮಟ್ಟ ಏರಿಕೆ
ಬೇಸಗೆ ಕಾಲದಲ್ಲಿ ನದಿಯಲ್ಲಿ ನೀರಿನ ಹರಿವು ಬಹಳ ಕಡಿಮೆಯಾಗುತ್ತದೆ. ಆದರೆ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಯಲ್ಲಿನ ನೀರು ಸಮುದ್ರ ಸೇರುತ್ತದೆ. ಮಳೆಗಾಲ ಕಳೆದ ಬಳಿಕ ಹಲವು ತಿಂಗಳು ನದಿಯಲ್ಲಿ ನೀರಿನ ಹರಿವು ಉತ್ತಮವಾಗಿರುತ್ತದೆ. ಆದರೆ ಆ ನೀರು ಕೂಡ ಮುಂದಕ್ಕೆ ಹರಿದು ಸಮುದ್ರ ಸೇರುವುದರಿಂದ ಜನರ ಉಪಯೋಗಕ್ಕೆ ಸಿಗುವುದಿಲ್ಲ.

ಆದುದರಿಂದ ಹಳೆಯ ಸೇತುವೆಯನ್ನು ಅಗತ್ಯ ರೀತಿಯಲ್ಲಿ ಮರು ವಿನ್ಯಾಸಗೊಳಿಸಿ ಕಿಂಡಿ ಅಣೆಕಟ್ಟಾಗಿ ಮಾರ್ಪಾಟು ಮಾಡಿದರೆ ಮಳೆಗಾಲ ಮುಗಿದು ಕೆಲವು ತಿಂಗಳುಗಳ ಕಾಲ ನದಿಯ ನೀರನ್ನು ಸಂಗ್ರಹವಾಗುವಂತೆ ಮಾಡಬಹುದು.

ಬೇಸಗೆ ಕಾಲದಲ್ಲಿ ಅಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದರೆ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗಿ ಪರಿಸರದ ಕೃಷಿಕರಿಗೆ ಮಾತ್ರವಲ್ಲದೆ ಬಾವಿ, ಕರೆಗಳಲ್ಲಿಯೂ ನೀರಿನ ಲಭ್ಯತೆ ಹೆಚ್ಚಬಹುದು ಎನ್ನುತ್ತಾರೆ ಗ್ರಾ.ಪಂ. ಸದಸ್ಯ ದೇವಯ್ಯ ಗೌಡ ಪನ್ಯಾಡಿ. ಹಳೆಯ ಸೇತುವೆಯಾದರೂ ಉತ್ತಮ ಸ್ಥಿತಿಯಲ್ಲಿರುವುದರಿಂದ ಕಡಿಮೆ ವೆಚ್ಚದಲ್ಲಿ ಕಿಂಡಿ ಅಣೆಕಟ್ಟಿಗೆ ಬಳಕೆ ಮಾಡಬಹುದು ಎನ್ನುವುದು ಅವರ ಅಭಿಪ್ರಾಯ.

Advertisement

ಜಿ.ಪಂ.ಗೆ ಪತ್ರ
ಹೊಸಮಠದ ಹಳೆಯ ಸೇತುವೆ ಯನ್ನು ಕಿಂಡಿ ಅಣೆಕಟ್ಟಾಗಿ ಬಳಕೆ ಮಾಡುವ ಕುರಿತು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಬರೆದುಕೊಳ್ಳಲು ನಿರ್ಣಯಿಸಲಾಗಿದೆ. ಶೀಘ್ರ ಈ ಕುರಿತು ಜಿ.ಪಂ.ಗೆ ಪತ್ರ ಬರೆಯ ಲಾಗುವುದು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಕುರಿತು ಅಗತ್ಯ ತೀರ್ಮಾನ ಕೈಗೊಳ್ಳಬೇಕಿದೆ.
– ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌, ಪಿಡಿಒ, ಕುಟ್ರಾಪ್ಪಾಡಿ ಗ್ರಾ.ಪಂ.

ತಜ್ಞರ ಜತೆ ಚರ್ಚಿಸಿ ಕ್ರಮ
ಉಪಯೋಗದಲ್ಲಿರುವ ಸೇತುವೆಗಳನ್ನು ಕಿಂಡಿ ಅಣೆಕಟ್ಟುಗಳಾಗಿ ಬಳಕೆ ಮಾಡುತ್ತಿರುವ ಉದಾಹರಣೆ ಹಲವೆಡೆ ಇದೆ. ಆದರೆ ಹೊಸಮಠದ ಹಳೆಯ ಸೇತುವೆ ಮುಳುಗು ಸೇತುವೆಯಾಗಿದ್ದು, ನೀರಿನಲ್ಲಿ ತೇಲಿ ಬರುವ ಮರದ ದಿಮ್ಮಿಗಳು ಹಾಗೂ ಕೊಂಬೆಗಳು ಎತ್ತರ ಕಡಿಮೆ ಇರುವ ಆ ಸೇತುವೆ ಯಲ್ಲಿ ಸಿಲುಕಿಕೊಳ್ಳು ವುದರಿಂದ ಕಿಂಡಿ ಅಣೆಕಟ್ಟಾಗಿ ಆದನ್ನು ಉಪಯೋಗಿ ಸುವ ನಿಟ್ಟಿನಲ್ಲಿ ಅಧ್ಯಯನ ಅಗತ್ಯವಿದೆ. ಈ ಕುರಿತು ತಜ್ಞರಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬಹುದು.
– ಪ್ರಮೋದ್‌ ಕುಮಾರ್‌ ಕೆ.ಕೆ. ಎಇಇ, ಪಿಡಬ್ಲು ್ಯಡಿ

ನಾಗರಾಜ್ ಎನ್ ಕೆ

Advertisement

Udayavani is now on Telegram. Click here to join our channel and stay updated with the latest news.

Next