Advertisement

ಕಂಚುಗೋಡು: ಕತ್ತಲೆಯಲ್ಲೇ ಕಾಲ ಕಳೆಯುತ್ತಿರುವ ಕುಟುಂಬ

05:36 PM Dec 15, 2021 | Team Udayavani |

ತ್ರಾಸಿ: ಸರಕಾರ ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ನೀಡಲು ಮುಂದಾಗಿದ್ದರೆ, ಇಲ್ಲೊಂದು ಕುಟುಂಬವು 8 ವರ್ಷಗಳಿಂದ ಕತ್ತಲೆಯಲ್ಲೇ ಕಾಲ ಕಳೆಯುತ್ತಿದೆ.

Advertisement

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಾಡು ಗ್ರಾಮದ ಕಂಚುಗೋಡು ಖಾರ್ವಿಕೇರಿ ನಿವಾಸಿ ನಾಗರಾಜ ಖಾರ್ವಿ ಕುಟುಂಬ ಮನೆಗೆ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ 8 ವರ್ಷ ಕಳೆದರೂ ವಿದ್ಯುತ್‌ ಸಂಪರ್ಕ ಭಾಗ್ಯ ಇನ್ನೂ ದೊರೆತಿಲ್ಲ.

ಕ್ಯಾಂಡಲ್‌ ದೀಪದಡಿ ಓದು
ಮೀನುಗಾರಿಕೆಯನ್ನೇ ನಂಬಿರುವ ನಾಗರಾಜ ಖಾರ್ವಿ ಕಂಚುಗೋಡು ಖಾರ್ವಿಕೇರಿ ಎಂಬಲ್ಲಿ ಪುಟ್ಟ ಮನೆ
ಯೊಂದರಲ್ಲಿ ಪತ್ನಿ ಗೀತಾ ಖಾರ್ವಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಬಡತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದಿರುವುದರಿಂದ ಕತ್ತಲೆ ಯಲ್ಲೇ ದಿನ ಕಳೆಯುವ ಪರಿಸ್ಥಿತಿ ಈ ಬಡ ಕುಟುಂಬದ್ದಾಗಿದೆ. ಪುಟ್ಟ ಮಕ್ಕಳು ಕ್ಯಾಂಡಲ್‌ ದೀಪದಡಿಯೇ ರಾತ್ರಿ ಓದುವಿಕೆ, ಬರೆಯಬೇಕಾದ ಪರಿಸ್ಥಿತಿಯಿದೆ.

ಸೀಮೆಎಣ್ಣೆಯು ಸಿಗುತ್ತಿಲ್ಲ
ವಿದ್ಯುತ್‌ ಸಂಪರ್ಕವೂ ಇಲ್ಲದಿರುವುದ ರಿಂದ ಚಿಮಿಣಿ ದೀಪದ ಬೆಳಕೇ ಆಸರೆಯಾಗಿದ್ದು, ಆದರೆ ಈಗ ಪಡಿತರದಲ್ಲಿ ಸೀಮೆಎಣ್ಣೆ ಸಹ ಕೊಡದ ಕಾರಣ ರಾತ್ರಿ ಚಿಮಿಣಿ ದೀಪ ಹಚ್ಚಲು ಸೀಮೆಎಣ್ಣೆ ಕೂಡ ಸಿಗುತ್ತಿಲ್ಲ. ಹೀಗಾಗಿ ಮೇಣದಬತ್ತಿ ಹಚ್ಚಿಕೊಂಡು ರಾತ್ರಿಯೆಲ್ಲ ಕಾಲ ಕಳೆಯುವಂತಾಗಿದೆ.

ನಿರಾಕ್ಷೇಪಣಾ ಪತ್ರ ನೀಡುತ್ತಿಲ್ಲ
ಮನೆಯ ವಿದ್ಯುತ್‌ ಸಂಪರ್ಕದ ನಿರಾಕ್ಷೇಪಣ ಪತ್ರಕ್ಕಾಗಿ ಕಳೆದ 5 ತಿಂಗಳಿನಿಂದ ಗ್ರಾಮ ಪಂಚಾಯತ್‌ಗೆ ಅರ್ಜಿ
ಹಿಡಿದು ಅಲೆದಾಡುತ್ತಿದ್ದರೂ ಈವರೆಗೂ ಈ ಪತ್ರ ಸಿಕ್ಕಿಲ್ಲ. ವಿದ್ಯುತ್‌ ಸಂಪರ್ಕ ನೀಡುವಂತೆ ಮೆಸ್ಕಾಂಗೆ ಅರ್ಜಿ ಸಲ್ಲಿಸಿ ದ್ದರೂ ಕೂಡ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮೆಸ್ಕಾಂ ಮಾರ್ಗದಾಳುಗಳು ಬಂದು ಪರಿಶೀಲನೆ ಮಾಡಿ ಹೋಗಿರುವುದು ಬಿಟ್ಟರೆ ವಿದ್ಯುತ್‌ ಸಂಪರ್ಕ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಇವರು ವಾಸಿಸುತ್ತಿರುವ ಜಾಗದ ಮಾಲಕರು ವಿದ್ಯುತ್‌ ಸಂಪರ್ಕ ಪಡೆಯಲು ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದರೂ, ಈವರೆಗೆ ವಿದ್ಯುತ್‌ ಸಂಪರ್ಕ ನೀಡಲು ಸ್ಥಳೀಯಾಡಳಿತ ಮತ್ತು ಮೆಸ್ಕಾಂ ಮೀನಾಮೇಷ ಎಣಿಸುತ್ತಿರುವುದರ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ:ಅಂದರ್‌-ಬಾಹರ್‌ ಚದುರಂಗದಲ್ಲಿ ದಡ ಸೇರಿದ ಬಿಜೆಪಿ

ವಿದ್ಯುತ್‌ ಸಂಪರ್ಕಕ್ಕೆ ಸ್ಥಳೀಯಾಡಳಿತದ ನಿರಾಕ್ಷೇಪಣಾ ಪತ್ರ ಬೇಡ ಎಂದು ಸರಕಾರ ಒಂದೆಡೆ ಹೇಳುತ್ತಿದ್ದರೂ ಈ ಪತ್ರ ಇಲ್ಲದೆ ವಿದ್ಯುತ್‌ ಸಂಪರ್ಕ ನೀಡಲು ಮೆಸ್ಕಾಂ ನಿರಾಕರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಒಪ್ಪಿಗೆ ಪತ್ರ ಸಿಕ್ಕಿಲ್ಲ
ನಾಗರಾಜ ಖಾರ್ವಿ ಅವರು ಮನೆಯ ಜಾಗದ ಮಾಲಕರ ಒಪ್ಪಿಗೆ ಪತ್ರ ನೀಡಿಲ್ಲ. ಹೀಗಾಗಿ ಅವರಿಗೆ ವಿದ್ಯುತ್‌ ಸಂಪರ್ಕದ ನಿರಾಕ್ಷೇಪಣಾ ಪತ್ರ ನೀಡಲು ಸಮಸ್ಯೆಯಾಗಿದೆ. ಜಾಗದ ಮಾಲಕರ ಒಪ್ಪಿಗೆ ಪತ್ರ ನೀಡಿದಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು.
-ಪಾರ್ವತಿ, ಪಿಡಿಒ, ಹೊಸಾಡು ಗ್ರಾ.ಪಂ.

ಮಂಜೂರಾತಿಗೆ ಕಳುಹಿಸಲಾಗಿದೆ
ಆ ಮನೆಗೆ ವಿದ್ಯುತ್‌ ಸಂಪರ್ಕ ನೀಡಲು ಈಗಾಗಲೇ ಅಂದಾಜು ಪಟ್ಟಿ ಸಿದ್ಧಪಡಿಸಿ, ಮಂಜೂರಾತಿಗೆ ಕಳುಹಿಸಿ ಕೊಡಲಾಗಿದೆ. ಸಾಮಗ್ರಿಗಳು ಸರಬರಾಜು ಆದ ತತ್‌ಕ್ಷಣ ವಿದ್ಯುತ್‌ ಸಂಪರ್ಕ ನೀಡಲಾಗುವುದು. ಸಾಮಾಗ್ರಿ ಸರಬರಾಜು ಆಗಲು ಸ್ವಲ್ಪ ವಿಳಂಬವಾಗಬಹುದು.
-ರಾಘವೇಂದ್ರ, ಜೆಇ, ಮೆಸ್ಕಾಂ ಗಂಗೊಳ್ಳಿ ಶಾಖೆ

Advertisement

Udayavani is now on Telegram. Click here to join our channel and stay updated with the latest news.

Next