ಖಾನಾಪುರ: ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಬೇಕೆನ್ನುವ ಉದ್ದೇಶದಿಂದ ದಾದರ-ಪುದುಚೇರಿ-ದಾದರ ಎಕ್ಸಪ್ರಸ್ ರೈಲು ನಿಲುಗಡೆ ಮಾಡುವ ಮೂಲಕ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಖಾನಾಪುರ ರೇಲ್ವೆ ನಿಲ್ದಾಣ ಹೊಸ ಕಟ್ಟಡ ಅಡಿಗಲ್ಲು ಸಮಾರಂಭ ಮತ್ತು ರೇಲ್ವೆ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಈ ಭಾಗದ ಜನರಿಗೆ ಮುಂಬೈ ಕಡೆಗೆ ತೆರಳಲು ರೈಲು ನಿಲುಗಡೆಗೆ ಪ್ರವಾಸಿಗರಿಂದ ಹಲವು ದಿನಗಳ ಬೇಡಿಕೆ ಇದ್ದು ವಾರದಲ್ಲಿಎರಡು ಬಾರಿ ಈ ಸೌಲಭ್ಯ ದೊರಕಲಿದೆ ಎಂದರು. ಇತರ ರೈಲುಗಳ ನಿಲುಗಡೆಗೆ ಕೂಡ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ರೇಲ್ವೆ ನಿಲ್ದಾಣ ಹೊಸ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದು 24 ರೇಲ್ವೆ ಬೋಗಿ ನಿಲುಗಡೆಗೆ ಪ್ಲಾಟ್ಫಾರ್ಮ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಾವಿ ಖಾನಾಪುರ ಹೆದ್ದಾರಿ ಕೆಲಸ ನಡೆದಿದ್ದು ಬೈಪಾಸ್ ರಸ್ತೆಯಿಂದ ಪಟ್ಟಣದ ಒಳ ರಸ್ತೆಗೆ ಒನ್ ಪಾಯಂಟ್ ಡೆವಲಪಮೆಂಟ್ ಯೋಜನೆಯಡಿ ರಾಜಾ ಸಿರ್ಯಾಮಿಕ್‌ದಿಂದ ರುಮೇವಾಡಿವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಶೀಘ್ರ ಈ ಕಾರ್ಯ ಪುರ್ನಗೊಳ್ಳಲಿದೆ ಎಂದರು.
ವಿಭಾಗೀಯ ರೇಲ್ವೆ ವ್ಯವಸ್ಥಾಪಕ ಬಿಜಿ.ಸಿಂಘ ಸ್ವಾಗತಿಸಿದರು. ರವಿಪ್ರಸಾದ ವಂದಿಸಿದರು. ವೇದಿಕೆ ಮೇಲೆ ತಾಪಂ ಅಧ್ಯಕ್ಷ ನಂದಾ ಕೊಡಚವಾಡಕರ ಉಪಸ್ಥಿತರಿದ್ದರು. ನಂತರ ಲೋಂಡಾಕ್ಕೆ ತೆರಳಿದ ಸಚಿವರು ಲೋಂಡಾ ರೇಲ್ವೆ ನಿಲ್ದಾಣ ಪಾದಚಾರಿ ಮೇಲು ಸೇತುವೆ ಅಡಿಗಲ್ಲು ಸಮಾರಂಭದಲ್ಲಿ ಕೂಡ ಭಾಗವಹಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಬಿಜೆಪಿ ಕಾರ್ಯಕರ್ತರೇ ದೂರ: ಕೇಂದ್ರ ಸಚಿವರ ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಬೆರಳೆಣಿಕೆಯ ಮುಖಂಡರು ಮಾತ್ರ ಕಾಣಿಸಿಕೊಂಡರು.