Advertisement

ಕನಕವಾಡ ಶಾಲೆಯಲ್ಲಿ ಶಿಕ್ಷಕರೂ ಇಲ್ಲ, ಕಟ್ಟಡವೂ ಸರಿ ಇಲ್ಲ!

05:04 PM Jun 27, 2018 | Team Udayavani |

ಶಿರಹಟ್ಟಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು
ಭಾಷಣ ಮಾಡುತ್ತಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ಮೂಲ ಸೌಲಭ್ಯಗಳು ಇವೆಯೋ, ಇಲ್ಲವೋ ಎನ್ನುವುದರತ್ತ ಗಮನ ಹರಿಸುವುದಿಲ್ಲ.

Advertisement

ಕನಕವಾಡದ ಸರಕಾರದ ವಿದ್ಯಾಕೇಂದ್ರ ಈಗ ಹಲವು ಸಮಸ್ಯೆಗಳ ಆಗರವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಯಾರು ಹೊಗುವುದಿಲ್ಲ. ಆದ್ದರಿಂದ ಸರ್ಕಾರಿ ಶಾಲೆಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬುದಕ್ಕೆ ಸಮೀಪದ ಕನಕವಾಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಉತ್ತಮ ನಿದರ್ಶನ.

ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ನೂರಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಮಕ್ಕಳಿಗೆ ಅನುಸಾರವಾಗಿ ಶಿಕ್ಷಕರು ಇಲ್ಲದೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ 1, 2, 3ನೇ ತರಗತಿ ಮಕ್ಕಳಿಗೆ ಒಬ್ಬರು ಹಾಗೂ 4, 5ನೇ ತರಗತಿಗೆ ಇನ್ನೊಬ್ಬರಂತೆ ಕೇವಲ ಇಬ್ಬರು ಶಿಕ್ಷಕರು ಎಲ್ಲ ವಿಷಯಗಳನ್ನು ಬೋಧಿಸುತ್ತಾರೆ.

ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೆ ನವೊದಯ, ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ಆಗುತ್ತಿಲ್ಲ, ಕೇವಲ ಕಾಟಾಚಾರಕ್ಕೆ ಶಾಲೆಯನ್ನು ತೆರೆಯಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ
ವ್ಯಕ್ತಪಡಿಸಿದರು. ಒಂದು ಕೊಠಡಿಯ ಛಾವಣಿ ಕಟ್ಟಿಗೆ ಮುರಿದು ಹಂಚುಗಳು ಬಿದ್ದು ಪುಡಿ ಪುಡಿಯಾಗಿವೆ. ಇನ್ನೆರಡು ಕೊಠಡಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಪಾಠ ಬೋಧನೆ ಮಾಡುತ್ತಿರುವುದು ವಿಷಾದಕರ ಸಂಗತಿ.

ಈ ಕುರಿತು ಹಲವಾರು ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಲೆಯ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಲೆಯನ್ನು ಸ್ಥಗಿತಗೊಳಿಸಿ ಉಗ್ರ
ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಶಾಲೆಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು. ಶಿಥಿಲಗೊಂಡ ಕೊಠಡಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಈ ಕುರಿತು ಶಾಸಕರೊಂದಿಗೆ ಮಾತನಾಡಿದ್ದು, ಸದ್ಯದಲ್ಲೆ ನೂತನ ಕಟ್ಟಡಕ್ಕೆ ಚಾಲನೆ
ನೀಡಲಾಗುವುದು. ಮತ್ತು ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ವಿ.ವಿ. ಶಾಲಿಮಠ ಪ್ರತಿಕ್ರಿಯಿಸಿದರು.

ಕೇವಲ 2 ಕೊಠಡಿಗಳಿರುವುದರಿಂದ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲಾಗುತ್ತಿಲ್ಲ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಲ್ಲದೇ ಶಾಲೆಗೆ ಇನ್ನೂ
3 ಕೊಠಡಿಗಳು ನಿರ್ಮಾಣವಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ವೀರೇಶರಡ್ಡಿ ಕಾಮರಡ್ಡಿ ಪ್ರತಿಕ್ರಿಯಿಸಿದರು.

ಅನೇಕ ವರ್ಷಗಳ ಹಿಂದೆಯೇ ಒಂದು ಕೊಠಡಿ ಶಿಥಿಲಗೊಂಡು ಬಿದ್ದು ಹೋಗಿದೆ. ಅಲ್ಲದೆ ಮಕ್ಕಳು ಅಲ್ಲಿಯೇ ಆಡುತ್ತಾರೆ. ಮೈ ಮರೆತರೆ ಅನಾಹುತ ಖಚಿತ. ಆದ್ದರಿಂದ ಕೂಡಲೆ ಅಧಿಕಾರಿಗಳು ಇತ್ತ ಗಮನ ಹರಿಸಿ ಶಿಥಿಲಗೊಂಡ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿ ನಿರ್ಮಿಸಬೇಕು.
ಗೋವಿಂದಪ್ಪ ನಿಚ್ಚಳದ,
ಮುಖ್ಯೋಪಾಧ್ಯಾಯ.

„ಪ್ರಕಾಶ.ಶಿ.ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next