ಕನಕಪುರ: ಆರು ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ ಕೆಂಪೇಗೌಡರ ತೋಟದಲ್ಲಿ ಏಳು ತಲೆ ನಾಗರ ಹಾವಿನ ಪೊರೆ ಕಾಣಿಸಿಕೊಂಡು ತಾಲೂಕಿನ ಜನರಲ್ಲಿ ಕೂತೂಹಲ ಮೂಡಿಸಿತ್ತು. ಈಗ ಅದೇ ಜಾಗದಲ್ಲಿ ವಿಜಯ ದಶಮಿಯಂದು ತಡರಾತ್ರಿ ಏಳು ತಲೆಯ ಸರ್ಪ ಪೊರೆ ಬಿಟ್ಟಿದ್ದು, ಕೋಟೆಕೊಪ್ಪ ಮತ್ತು ಸುತ್ತಮುತ್ತಲಿನ ನೂರಾರು ಜನ ಸರ್ಪ ಬಿಟ್ಟು ಹೋಗಿರುವ ಪೊರೆ ನೋಡಲು ಬರುತ್ತಿದ್ದಾರೆ.
ತಾಲೂಕಿನ ಕೋಡಿಹಳ್ಳಿ ಹೋಬಳಿ ಕೋಟೆಕೊಪ್ಪ ಬಳಿ ಇರುವ ಕಣಿವೆದೊಡ್ಡಿ (ಮರಿಗೌಡನದೊಡ್ಡಿ)ಯಲ್ಲಿನ ಕೋಟೆಕೊಪ್ಪ ದೊಡ್ಡಕೆಂಪೇಗೌಡರ ತೋಟದಲ್ಲಿ ಬೆಳಗ್ಗೆ ಏಳು ತಲೆಯ ನಾಗಸರ್ಪದ ಪೊರೆಯೊಂದು ಕಾಣಿಸಿಕೊಂಡಿದ್ದು, ಜಮೀನಿನ ಮಾಲೀಕ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ತೀವ್ರ ಕುತೂಹಲ: ಕೆಲ ತಿಂಗಳ ಹಿಂದೆ ಇದೇ ರೀತಿ ಸಮೀಪದ ಸ್ಥಳದಲ್ಲಿ ಸರ್ಪದ ಪೊರೆ ಬಿಟ್ಟಿದ್ದು, ಅದನ್ನು ಸಂರಕ್ಷಿಸಿ ಗಾಜಿನ ಪೆಟ್ಟಿಗೆಯಲ್ಲಿ ಭಕ್ತರ ದರ್ಶನಕ್ಕೆ ಇಡಲಾಗಿದೆ. ಬಳಿಕ ಈ ಸ್ಥಳದಲ್ಲಿ ವಿಶೇಷ ಪೂಜೆ, ದೇವಸ್ಥಾನವನ್ನು ನಿರ್ಮಿಸಬೇಕೆಂಬ ಸುದ್ದಿ ಹರಡುತ್ತಿದ್ದ ಬೆನ್ನಲ್ಲೇ ವಿಜಯ ದಶಮಿಯ ಮಂಗಳವಾರ ರಾತ್ರಿಯ ವೇಳೆ ಪ್ರತ್ಯಕ್ಷವಾಗಿದೆ ಎನ್ನಲಾದ ಏಳು ತಲೆಯ ನಾಗರ ಹಾವು ತನ್ನ ಮೈಮೇಲಿನ ಪೊರೆಯನ್ನು ಮೊದಲು ಬಿಟ್ಟಿದ್ದ ಸಮೀಪದಲ್ಲಿಯೇ ಬಿಟ್ಟು ಹೋಗಿದೆ ಎಂಬ ಸುದ್ದಿ ಗ್ರಾಮಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅನುಮಾನಕ್ಕೆ ಎಡೆಮಾಡಿಕೊಟ್ಟ ಪೊರೆ: ಮರಿಗೌಡನದೊಡ್ಡಿ ಗ್ರಾಮದ ಪಕ್ಕದಲ್ಲಿ ಏಳು ತಲೆಯ ನಾಗರ ಹಾವು ಕಾಣಿಸಿಕೊಂಡು, ಅದು ಪೊರೆ ಬಿಟ್ಟು ಹೋಗಿದೆ ಎಂಬ ಸುದ್ದಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ವನ್ಯಜೀವಿ ಸಪ್ತಾಹದ ಸದಸ್ಯ ಟಿ.ಸಿ.ವೆಂಕಟೇಶ್ ತಿಳಿಸಿದ್ದಾರೆ.
ತಾವು ಆಗುಂಬೆ ಬಳಿ ಇರುವ ಕಾಳಿಂಗ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾಗ ಹಾವು ಶೀತ ವಲಯ ಪ್ರಾಣಿಯಾಗಿದ್ದು, ಹಾವಿಗೆ ಕತ್ತಲೆ ಆಗಿ ಬರುವುದಿಲ್ಲ. ಭ್ರೂಣಾವಸ್ಥೆಯಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗಿ ಎರಡು ತಲೆ ಹೊಂದಿರುವ ಉದಾಹರಣೆಗಳಿದೆ. ಅವು ಹೆಚ್ಚುದಿನ ಬದುಕುವುದಿಲ್ಲ. ಹಾವು ಉಷ್ಣಾಂಶ ಮತ್ತು ಹವಾಮಾನದ ವ್ಯತ್ಯಾಸಗಳಿಂದ ಪೊರೆ ಬಿಡುತ್ತವೆ. ಇವು ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಮಾತ್ರ ಪೊರೆ ಬಿಡುತ್ತವೆ ಎಂಬುದು ಸುಳ್ಳಾಗಿದ್ದು, ನಾಗರ ಹಾವು ವರ್ಷಕ್ಕೆ 6ರಿಂದ 7 ಬಾರಿ ಪೊರೆ ಬಿಡುತ್ತವೆ.
ಈ ಮೇಲಿನ ಘಟನೆ ಗಮನಿಸಿದರೆ, ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಇಂತಹ ಸುದ್ದಿಗಳನ್ನು ಹರಿಬಿಟ್ಟು, ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ. ಈ ಬಗ್ಗೆ ಸಂಶಯಗಳೇನಾದರೂ ಇದ್ದಲ್ಲಿ ಉರುಗ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಸ್ಪಷ್ಟನೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.