ದೊಡ್ಡಬಳ್ಳಾಪುರ: ಯೇಸು ಪ್ರತಿಮೆ ನಿರ್ಮಾಣಕ್ಕೆ ನೀಡಿರುವ ಜಾಗವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಿಂದೂಜಾಗರಣಾ ವೇದಿಕೆ ನೇತೃತ್ವದಲ್ಲಿ ಜ.13ರಂದು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್ ತಿಳಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು.
ನಿಯಮಗಳ ಗಾಳಿಗೆ ತೂರಿ: ಕಪಾಲ ಬೆಟ್ಟ ಎಂದು ಗುರುತಿಸಲಾಗುತ್ತಿರುವ ಈ ಬೆಟ್ಟವು ಮೂಲದಲ್ಲಿ ಮುನೇಶ್ವರ ಸ್ವಾಮಿಯ ಸನ್ನಿಧಿ ಯಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ಈ ಪುಣ್ಯ ಭೂಮಿಯನ್ನು ಕ್ರೈಸ್ತೀಕರಣಗೊಳಿಸುವುದನ್ನು ತಡೆಯಲು ಕನಕಪುರ ಚಲೋ ಹಮ್ಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹಿಂದಿನ ಸರ್ಕಾರವು ನಿಯಮಗಳನ್ನು ಗಾಳಿಗೆತೂರಿ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಗೋಮಾಳ ಮಂಜೂರು ಮಾಡಿದೆ. ಜಮೀನು ಸಿಗುವ ಮುನ್ನ ಅಕ್ರಮವಾಗಿ ಕೆಲಸ ಆರಂಭಿಸಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆಯೂ ಕನಕಪುರ ತಹಶೀಲ್ದಾರ್‌ಗೆ ದೂರು ನೀಡಲಾಗುವುದು ಎಂದರು.
ಈ ಹಿಂದೆ ಕನಕಪುರ ರಸ್ತೆಯಲ್ಲಿ ಇಸ್ಕಾನ್ ಶ್ರೀ ಕೃಷ್ಣ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಹೊರಟಾಗ ಕ್ರೈಸ್ತ ಮಿಷನರಿಗಳು ವಿರೋಧ ವ್ಯಕ್ತಪಡಿಸಿದ್ದವು. ಸ್ಥಳೀಯ ಪ್ರಭಾವಿ ಮುಖಂಡರೊಬ್ಬರನ್ನು ಬಳಸಿಕೊಂಡು ಇದಕ್ಕೆ ತಡೆ ಒಡ್ಡಲಾಗಿತ್ತು ಎಂದು ದೂರಿದರು ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥ್ ಮಾತನಾಡಿ,ರಾಜಕೀಯ ಲಾಭಗಳಿಸಲು ಕಾನೂನು ಬಾಹಿರವಾಗಿ ಮುನೇಶ್ವರ ಸ್ವಾಮಿಯ ಬೆಟ್ಟವೆಂದು ಪ್ರಸಿದ್ದಿ ಹೊಂದಿದ್ದ ಧಾರ್ಮಿಕ ಕ್ಷೇತ್ರವನ್ನು ಕ್ರೈಸ್ತಿಕರಣ ಗೊಳಿಸಲಾಗುತ್ತಿದೆ,ಈಗಾಗಲೆ ಚಾಮರಾಜ ನಗರ,ಕೊಳ್ಳೆಗಾಲ,ರಾಮನಗರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಆಮೀಷದ ಮತಾಂತರ ನಡೆಯುತ್ತಿದ್ದು,ಯೇಸು ಪ್ರತಿಮೆ ಸ್ಥಾಪಿಸಲುಮುಂದಾಗಿರುವುದು ಮತಾಂತರಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಿವೃತ್ತ ಯೋಧ ಎಸ್.ಶಿವಕುಮಾರ್ ಮಾತನಾಡಿ,ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ದಿ ಟ್ರಸ್ಟ್ ಗೆ ಕಾನೂನು ಗಾಳಿಗೆ ತೂರಿ ಸರ್ಕಾರಿ ಗೋಮಾಳ ಜಮೀನನ್ನು ಮಂಜೂರು ಮಾಡಲಾಗಿದೆ.ಈ ವ್ಯಾಪ್ತಿಯ ನಲ್ಲಹಳ್ಳಿ ಗ್ರಾಮದಲ್ಲಿ 1828 ಜಾನುವಾರುಗಳಿದ್ದು,ನಿಯಮಾನುಸಾರ 548 ಎಕರೆ ಗೋಮಾಳ ಜಮೀನನ್ನು ಕಾಯ್ದಿರಿಸಬೇಕು.ಆದರೆ ಟ್ರಸ್ಟೆ$Y ಜಮೀನು ನೀಡಿರುವ ಕಾರಣ 209.22 ಎಕರೆ ಮಾತ್ರವಿದ್ದು ಮಂಜೂರು ಮಾಡಿರುವುದು ಕಾನೂನು ಬಾಹಿರವೆಂದು ಸಾಭೀತಾಗಿದೆ ಎಂದರು. ಅಲ್ಲದೆ ಈ ಬೆಟ್ಟದಲ್ಲಿನ ಜೀವ ವೈಧ್ಯತೆಗೂ ತೊಂದರೆ ಉಂಟಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷ ನಂದಾರಾಂ ಸಿಂಗ್ ,ಕಾರ್ಯಕರ್ತರಾದ ಮಹೇಶ್ ,ಮನು,ಮಾಜಿ ಸಂಚಾಲಕ್ ಸುಬ್ರಮಣಿ, ತೂಬಗೆರೆ ಹೋಬಳಿ ಅಧ್ಯಕ್ಷ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರರಿದ್ದರು.