ರಾಮನಗರ: ಜಿಲ್ಲೆಯ ಗಡಿಭಾಗದಲ್ಲಿರುವ ಕನಕಪುರ ತಾಲೂಕಿನ ಸಂಗಮದಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ ತಮಿಳುನಾಡಿಗೆ ಅಪಾರ ಪ್ರಮಾಣದಲ್ಲಿ ಹರಿದೋಗುತ್ತಿದೆ.
ಕೆಆರ್ ಎಸ್ ಮತ್ತು ಕಬಿನಿ ಜಲಾಶಯದಿಂದ ಶನಿವಾರ ಬೆಳಿಗ್ಗೆ 1.65 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಸಂಗಮ ಮೇಕೆದಾಟು ಬಳಿ ನದಿ ತುಂಬಿ ಹರಿಯುತ್ತಿದೆ.
ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಮುಳುಗಡೆ ಭೀತಿ ಇರುವ ಗ್ರಾಮಗಳ ಮೇಲೆ ನಿಗಾ ಇರಿಸಲಾಗಿದೆ.
ಸದ್ಯಕ್ಕೆ ಕನಕಪುರ ತಾಲೂಕಿನಲ್ಲಿ ನೆರೆ ಭೀತಿ ಎದುರಾಗಿಲ್ಲ. 2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ನದಿಗೆ ಬಂದರೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ.
ನದಿ ಅಪಾರ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಂಗಮ-ಮೇಕೆದಾಟು ಪ್ರವಾಸಿ ತಾಣಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ.