Advertisement

ರಾಮನಗರ: ತನ್ನ ಡೇರ್‌ ಡ್ಯಾಶ್‌ ನಡವಳಿಕೆಯಿಂದ ರಾಜಕೀಯ ಪಾಳಯದಲ್ಲಿ ಗೂಳಿ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ಗೆ ಮೂಗುದಾರ ಹಾಕಲು ಬಿಜೆಪಿ ಹೈಕಮಾಂಡ್‌ ಪಕ್ಷದ ಪ್ರಭಾವಿ ನಾಯಕ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸುವ ಮೂಲಕ ಎದುರಾಳಿಯೇ ಇಲ್ಲದೆ ನಿರಾಯಾಸವಾಗಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದ್ದ ಕೆಪಿಸಿಸಿ ಅಧ್ಯಕ್ಷರಿಗೆ ಪ್ರಬಲ ಪೈಪೋಟಿ ನೀಡಿದೆ.

Advertisement

ಇದುವರೆಗೆ ಜೆಡಿಎಸ್‌-ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿನ ಅಖಾಡಕ್ಕೆ ಹೆಸರಾಗಿದ್ದ ಕನಕಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ಹಣಾಹಣಿ ಏರ್ಪಟ್ಟಿದೆ. ಬಂಡೆಗಳ ನಾಡು ಕನಕಪುರದಲ್ಲಿ ಕಮಲ ಪಕ್ಷ ಎಷ್ಟರಮಟ್ಟಿಗೆ ಬೇರು ಬಿಡಲು ಶಕ್ತವಾಗುತ್ತದೆ ಎಂಬುದು ಈ ಬಾರಿಯ ಚುನಾವಣೆಯ ಕುತೂಹಲ.

ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ 4 ಬಾರಿ, ಕನಕಪುರ ಕ್ಷೇತ್ರದಿಂದ 3 ಬಾರಿ ಸೇರಿದಂತೆ ಒಟ್ಟು 7ಬಾರಿ ಗೆಲುವು ಸಾಧಿಸಿರುವ ಡಿ.ಕೆ.ಶಿವಕುಮಾರ್‌ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಈ ಬಾರಿ ಕನಕಪುರದಲ್ಲಿ ಗೆಲುವು ಸಾಧ್ಯವಿಲ್ಲ, 2028ರಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಮೂಲಕ ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಕನಕಪುರದ ಬಂಡೆ ಅಲುಗಿಸಲಾಗದು ಎಂಬುದನ್ನು ಒಪ್ಪಿಕೊಂಡಿದ್ದರು. ಇದರೊಂದಿಗೆ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಎದುರಾಳಿಯೇ ಇಲ್ಲದಂತಾಗಿದ್ದು, ಒಂದು ಲಕ್ಷಕ್ಕೂ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಡಿ.ಕೆ.ಶಿವಕುಮಾರ್‌ ಅವರದ್ದಾಗಿತ್ತು. ಬಿಜೆಪಿ ಆರ್‌. ಅಶೋಕ್‌ ಅವರನ್ನು ಕಣಕ್ಕಿಳಿಸುವ ಜೊತೆಗೆ ರಾಷ್ಟ್ರೀಯ ನಾಯಕರು ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಪೈಪೋಟಿ ನೀಡಲು ಎಲ್ಲಾ ರೀತಿಯ ಕಸತ್ತು ನಡೆಸುತ್ತಿದ್ದಾರೆ.

ಇನ್ನು ಜೆಡಿಎಸ್‌ನಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ತಮಗೆ ಎದುರಾಳಿಯಾಗಿದ್ದವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವ ಮೂಲಕ ಡಿ.ಕೆ. ಶಿವಕುಮಾರ್‌ ಕ್ಷೇತ್ರದಲ್ಲಿ ತಮ್ಮ ಪಾಬಲ್ಯ ಹೆಚ್ಚಿಸಿಕೊಂಡಿದ್ದಾರೆ. ಇತ್ತ ಸಹೋದರ ಡಿ.ಕೆ.ಸುರೇಶ್‌ ಅಣ್ಣನ ಪರವಾಗಿ ಕ್ಷೇತ್ರದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌ ಪರವಾಗಿ ಅವರ ಪತ್ನಿ ಉಷಾ ಶಿವಕುಮಾರ್‌ ಸಹ ಕಣಕ್ಕಿಳಿದಿದ್ದಾರೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದ ಡಿ.ಕೆ.ಶಿವಕುಮಾರ್‌ ಕನಸ್ಸು ನನಸಾದೀತೆ ಕಾಯ್ದು ನೋಡಬೇಕಿದೆ.

ಶಕ್ತಿ ಉಳಿಸಿಕೊಂಡೀತೆ ಜೆಡಿಎಸ್‌?: ಕಳೆದ 7 ಚುನಾವಣೆಗಳಲ್ಲಿ ಡಿಕೆಶಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್‌, ಈ ಬಾರಿ ಸಾಮಾನ್ಯ ಕಾರ್ಯಕರ್ತ ನಾಗರಾಜು ಅವ ರನ್ನು ಕಣಕ್ಕಿಳಿಸಿದೆ. ಇಲ್ಲಿ ಜೆಡಿಎಸ್‌ಗೆ ತನ್ನದೇ ಆದ ಮತಬ್ಯಾಂಕ್‌ ಇದ್ದು, 40ರಿಂದ 50 ಸಾವಿರ ಮತ ಪಡೆಯುತ್ತದೆ. ಆದರೆ, ಈ ಹಿಂದೆ ಜೆಡಿಎಸ್‌ನಲ್ಲಿದ್ದವರು ಕಾಂಗ್ರೆಸ್‌ ಸೇರಿ ದ್ದಾರೆ. ಸಿಂಧ್ಯಾ ಅವರು ಸಕ್ರಿಯ ರಾಜಕಾರಣ ಬಿಟ್ಟಿದ್ದಾರೆ. ಹೀಗಾಗಿ, ಈ ಬಾರಿ ಜೆಡಿಎಸ್‌ ಎಷ್ಟು ಮತ ಪಡೆಯಲಿದೆ ಎಂಬುದನ್ನು ನೋಡಬೇಕಾಗಿದೆ.

Advertisement

ಸಾಮ್ರಾಟನಾಗುವರೇ ಅಶೋಕ್‌?: ಹೊಂದಾಣಿಕೆ ರಾಜಕಾರಣ ಇಲ್ಲ ಎಂಬ ಸಂದೇಶ ನೀಡುವ ಉದ್ದೇಶದಿಂದ ಪ್ರಭಾವಿ ಸಚಿವ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ, ಕನಕ ಪುರದಲ್ಲಿ ನೆಲೆ ಕಾಣಲು ಹವಣಿಸುತ್ತಿದೆ. ಇದುವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿ ಠೇವಣಿಯನ್ನು ಉಳಿಸಿ ಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 6 ಸಾವಿರ ಮತಗಳನ್ನು ಪಡೆದಿದ್ದರು. ಇದು ಕ್ಷೇತ್ರದ ಚುನಾವಣಾ ಇತಿಹಾಸ ದಲ್ಲೇ ಬಿಜೆಪಿ ಪಡೆದ ಅತಿ ಹೆಚ್ಚು ಮತಗಳು. ಈ ಬಾರಿ ಅಶೋಕ್‌ ಅವರನ್ನು ಕಣಕ್ಕಿಳಿಸುವ ಜೊತೆಗೆ ರಾಷ್ಟ್ರ ನಾಯಕರು ಪ್ರಚಾರ ನಡೆಸಿ ಕ್ಷೇತ್ರದಲ್ಲಿ ಬಿಜೆಪಿ ಪರ ವಾದ ಅಲೆ ಸೃಷ್ಟಿಸಲು ಶ್ರಮಿಸುತ್ತಿದ್ದಾರೆ. ಇನ್ನು ಆರ್‌.ಅಶೋಕ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next