ಕನಕಗಿರಿ: ಹಿಂದಿನ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಮನೆಯ ಬಾಗಿಲಿಗೆ ಆಡಳಿತದ ಅನುಕೂಲ ಸಿಗಲು ಹೊಸ ತಾಲೂಕುಗಳನ್ನು ಜಾರಿಗೊಳಿಸಿತು. ಆದರೆ ತಾಲೂಕು ಕಚೇರಿ ಆರಂಭವಾಗಿ ಒಂದೂವರೆ ವರ್ಷ ಗತಿಸಿದರೂ ಇದುವರೆಗೂ ತಾಲೂಕಿಗೆ ಸಂಬಂಧಿಸಿದ ದಾಖಲೆಗಳನ್ನು ಗಂಗಾವತಿ ತಹಶೀಲ್ದಾರ್ ಕಚೇರಿಯಿಂದ ಕನಕಗಿರಿ ತಹಶೀಲ್ದಾರ್ ಕಚೇರಿಗೆ ರವಾನಿಸಿಲ್ಲ. ಇದರಿಂದ ಹಳೆ ದಾಖಲೆಗಳಿಗಾಗಿ ತಾಲೂಕಿನ ಜನತೆ ಗಂಗಾವತಿಗೆ ತೆರಳುವುದು ಇನ್ನೂ ತಪ್ಪಿಲ್ಲ.
ಕನಕಗಿರಿ, ನವಲಿ, ಹುಲಿಹೈದರ್, ಹೋಬಳಿ ವ್ಯಾಪ್ತಿಯ ಸುಮಾರು 66 ಹಳ್ಳಿಯ ಜನರು ತಮ್ಮ ದಾಖಲೆಗಳಿಗಾಗಿ ಗಂಗಾವತಿಯ ತಹಶೀಲ್ದಾರ್ ಹಾಗೂ ತಾಲೂಕು ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ. ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಭೂಮಿ ಕೇಂದ್ರ, ಆಹಾರ ಇಲಾಖೆ, ಉಪನೋಂದಣಿ, ಸರ್ವೇ ಇಲಾಖೆಗಳನ್ನು ಕನಕಗಿರಿ ತಾಲೂಕಿಗೆ ವರ್ಗಾಯಿಸದ ಕಾರಣ ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ಮತ್ತು ದಾಖಲೆಗಳನ್ನು ಪಡೆಯಲು 400 ರೂ. ಖರ್ಚು ಮಾಡಿಕೊಂಡು ನಿತ್ಯ ಗಂಗಾವತಿಗೆ ತಿರುಗಾಡುತ್ತಿದ್ದಾರೆೆ. ಒಂದು ವೇಳೆ ಹೋದ ಕೆಲಸ ಆಗದೇ ಇದ್ದಾಗ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ತಮ್ಮ ಗ್ರಾಮಗಳಿಗೆ ಮರಳುವಂತಹ ಪರಿಸ್ಥಿತಿ ನಿರ್ಮಾವಾಗಿದೆ.
ನೂತನ ತಾಲೂಕಿಗೆ ತಹಶೀಲ್ದಾರ್ ಆಗಿ ರವಿ ಅಂಗಡಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಾಲಯದಲ್ಲಿ ಕೆಲಸ ಮಾಡಲು ಬೆರಳೆಣಿಕೆ ಸಿಬ್ಬಂದಿ ಮಾತ್ರ ಇದ್ದಾರೆ. ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕರು ಅನುಕೂಲಕ್ಕಾಗಿ ಕೊಡಲೇ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿದೆ.
ಕಾರ್ಯಾರಂಭ ಮಾಡದ ಇಲಾಖೆ: ಕನಕಗಿರಿ ತಾಲೂಕು ಆದರೂ ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಕೃಷಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕೋರ್ಟ್, ಅರಣ್ಯ ಇಲಾಖೆ, ತಾಲೂಕಾ ಆಸ್ಪತ್ರೆ, ಪಶು ಇಲಾಖೆ, ತಾಲೂಕಾ ಕ್ರೀಡಾಂಗಣಾ, ಅಗ್ನಿ ಶಾಮಕ, ಗ್ರಂಥಾಲಯ ಸೇರಿದಂತೆ ವಿವಿಧ ತಾಲೂಕು ಆಡಳಿತಕ್ಕೆ ಒಳಪಡುವ ಇಲಾಖೆಗಳು ಕಾರ್ಯಾರಂಭ ಮಾಡದೇ ಇರುವುದರಿಂದ ಜನತೆ ಗಂಗಾವತಿಗೆ ಹೋಗಿ ಸೌಲಭ್ಯ ಪಡೆಯಬೇಕಾಗಿದೆ.
•ಶರಣಪ್ಪ ಗೋಡಿನಾಳ