Advertisement

ಕನಕಗಿರಿ: ಮಾತು ಬಾರದ ಸಹೋದರಿಯರಿಗೆ ನರೇಗಾ ಆಸರೆ

05:52 PM Jun 01, 2024 | Team Udayavani |

ಉದಯವಾಣಿ ಸಮಾಚಾರ
ಕನಕಗಿರಿ: ಕೇಂದ್ರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ ಕೇವಲ ಯುವಕರು, ವಯಸ್ಕರು, ವೃದ್ಧರಿಗಷ್ಟೇ ಅಲ್ಲ
ವಿಶೇಷಚೇತನರಿಗೂ ಆಸರೆಯಾಗಿದೆ. ತಾಲೂಕಿನಲ್ಲಿ ಸಾಕಷ್ಟು ವಿಶೇಷ ಚೇತನರು ನರೇಗಾ ಯೋಜನೆಯಡಿ ತಮ್ಮ ಬದುಕನ್ನೇ
ಕಟ್ಟಿಕೊಂಡಿದ್ದಾರೆ. ಇದ್ದೂರಲ್ಲೇ ಕೆಲಸ ಮಾಡುವ ಮೂಲಕ ಎಲ್ಲೂ ಗುಳೆ ಹೋಗದೇ ತಮ್ಮ ಜೀವನಮಟ್ಟ ಸರಿದೂಗಿಸಿಕೊಂಡಿದ್ದಾರೆ. ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಬುನ್ನಟ್ಟಿ ಗ್ರಾಮದ ಅಂಬ್ರಮ್ಮ, ಶಂಕ್ರಮ್ಮ, ಹಾಲಮ್ಮ ಈ ಮೂವರು ಸಹೋದರಿಯರೇ ಸಾಕ್ಷಿಯಾಗಿದ್ದಾರೆ.

Advertisement

ಈ ಮೂವರು ಬಾಯಿ ಇಲ್ಲದ ಸಹೋದರಿಯರು. ಹುಟ್ಟಿನಿಂದಲೇ ಇವರಿಗೆ ಮಾತು ಬರುತ್ತಿಲ್ಲ. ಅಲ್ಲದೇ ಮೂವರು ಸಹೋದರಿಯರಿಗೂ ಮದುವೆಯಾಗಿದ್ದು, ಅದರಲ್ಲಿ ಇಬ್ಬರ ಗಂಡಂದಿರು ಮೃತಪಟ್ಟಿದ್ದು, ತಮ್ಮ ಸಹೋದರನ ಬಳಿ ಇದ್ದಾರೆ. ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನರೇಗಾ ಯೋಜನೆಯಡಿ ಕೆಲಸ ಮಾಡುತ್ತ ಬಂದಿದ್ದಾರೆ.

ಗ್ರಾಮದಲ್ಲಿ ನಾಲಾ, ಕೆರೆ ಹೂಳೆತ್ತುವ ಕೆಲಸಕ್ಕೆ ತೆರಳುವ ಇವರು ಪ್ರತಿ ವರ್ಷ 80ಕ್ಕೂ ಹೆಚ್ಚು ಮಾನವ ದಿನಗಳನ್ನು ಪೂರೈಸಿದ್ದಾರೆ. ಇನ್ನು ಇಬ್ಬರು ಸಹೋದರಿಯರಿಗೆ ಮಕ್ಕಳಿದ್ದು, ಶಾಲೆಗೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿಯಡಿ ದುಡಿದ ದುಡ್ಡು ಮಕ್ಕಳ ಓದಿಗೆ ಅನುಕೂಲವಾಗಿದೆ ಎಂದು ಕೈಸನ್ನೆ ಮೂಲಕ ಖುಷಿ ವ್ಯಕ್ತಪಡಿಸುತ್ತಾರೆ.

ವಿಶೇಷಚೇತನರು ಸಮಾಜದ ಅವಿಭಾಜ್ಯ. ಅವರಿಗೆ ಮಾತಿನ ಅನುಕಂಪ ತೋರಿಸುವ ಬದಲು ಅವರು ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಅ ನಿಟ್ಟಿನಲ್ಲಿ ನಮ್ಮ ನರೇಗಾ ಯೋಜನೆ ಸಹಕಾರಿ ಯಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಅಂಗ ವೈಕಲ್ಯವುಳ್ಳವರಿಗೆ, ಹಿರಿಯ ನಾಗರಿಕರಿಗೆ ನರೇಗಾದಡಿ ಕೆಲಸ ನೀಡಲಾಗಿದೆ.
ನಾಗಲಿಂಗಪ್ಪ, ಗ್ರಾಪಂ ಪಿಡಿಒ,
ಕರಡೋಣ.

ಬೇಸಿಗೆಯಲ್ಲಿ ಗುಳೆ ತಡೆಯುವ ಉದ್ದೇಶದಿಂದ ತಾಲೂಕಿನಾದ್ಯಂತ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಆರಂಭಿಸಿದ್ದು, ವಿಶೇಷ ಚೇತನರು, ತೃತೀಯ ಲಿಂಗಿಗಳು ಸೇರಿದಂತೆ ಎಲ್ಲರಿಗೂ ಕೆಲಸ ಒದಗಿಸಲಾಗುತ್ತಿದೆ.
ಎಲ್‌.ವೀರೇಂದ್ರಕುಮಾರ್‌,
ಇಒ ತಾಪಂ ಕನಕಗಿರಿ

Advertisement

■ ಶ್ರೀನಿವಾಸ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next