Advertisement

ಚಿತ್ರವಾಗುತ್ತಿದೆ ಕನಕದಾಸರ ರಾಮಧಾನ್ಯ

10:15 AM Jun 24, 2017 | |

ಈ ಹಿಂದೆ “ಒಲವೇ ವಿಸ್ಮಯ’ ಮುಂತಾದ ಚಿತ್ರಗಳನ್ನು ಮಾಡಿದ್ದ ಟಿ.ಎನ್‌. ನಾಗೇಶ್‌, ಇದೀಗ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು ಕನಕದಾಸರ “ರಾಮಧಾನ್ಯ’ವನ್ನು ಒಂದಿಷ್ಟು ರೂಪಾಂತರ ಮಾಡಿ, ತೆರೆಯ ಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ. 

Advertisement

ಕನಕದಾಸರ ಜನಪ್ರಿಯ ಸಾಹಿತ್ಯದಲ್ಲಿ “ರಾಮಧಾನ್ಯ ಚರಿತೆ’ ಸಹ ಒಂದು. ಅದನ್ನು ಮೂಲವಾಗಿಟ್ಟುಕೊಂಡು ರೂಪಾಂತರ ತಂಡದವರು “ರಾಮಧಾನ್ಯ’ ನಾಟಕವನ್ನು ಮಾಡುತ್ತಾ ಬಂದಿದ್ದಾರೆ. ಕೆ.ಎಸ್‌.ಡಿ.ಎಲ್‌ ಚಂದ್ರು ನಿರ್ದೇಶನದ ಈ ನಾಟಕ ಈಗಾಗಲೇ ಹಲವು ನಾಟಕಗಳನ್ನು ಕಂಡಿದೆ. ಒಮ್ಮೆ ಈ ನಾಟಕ ನೋಡಿದ ನಾಗೇಶ್‌ ಅವರಿಗೆ, ಅದನ್ನಿಟ್ಟುಕೊಂಡು ಚಿತ್ರ ಮಾಡಬೇಕು ಎಂದನಿಸಿತಂತೆ.

ಆ ನಾಟಕಕ್ಕೆ ಕೆಲಸ ಮಾಡಿದ್ದ ಬಸವರಾಜ್‌ ಸೂಳೇರಿಪಾಳ್ಯ ಜೊತೆಗೆ ಸೇರಿ, ಈ ನಾಟಕವನ್ನು ಸಿನಿಮಾ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದಲ್ಲಿ ಮೂರು ವಿಭಿನ್ನ ಕಾಲಘಟ್ಟಗಳನ್ನು ತೆರೆದಿಡುವ ಪ್ರಯತ್ನವನ್ನು ಅವರು ಮಾಡುವುದಕ್ಕೆ ಹೊರಟಿದ್ದಾರೆ. ಚಿತ್ರದಲ್ಲಿ ಯಶಸ್‌ ಸೂರ್ಯ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಕನಕದಾಸರ ಪಾತ್ರವೂ ಒಂದು ಎಂಬುದು ವಿಶೇಷ.

ಈ ಚಿತ್ರವನ್ನು ನಾಗೇಶ್‌ ಸೇರಿದಂತೆ ಹತ್ತು ಜನ ಸೇರಿ ದಶಮುಖ ವೆಂಚರ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬೆನಕ ರಾಜು ಅವರು ಛಾಯಾಗ್ರಹಣ ಮಾಡಿದರೆ, ದೇಸಿ ಮೋಹನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಬಸವರಾಜ್‌ ಸೂಳೇರಿಪಾಳ್ಯ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಕೆಲಸಗಳು ಆರಂಭವಾಗಿದ್ದು, ಶ್ರಾವಣದಿಂದ ಚಿತ್ರೀಕರಣ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next