ಬೀದರ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲಕ್ಕೆ ಬೆಳಕಾಗಿದ್ದಾರೆ ಎಂದು ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹೇಳಿದರು. ಇಲ್ಲಿಯ ಶಿವಾಜಿನಗರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಹಾಗೂ ನಿವೃತ್ತ ಕೃಷಿ ಅಧಿ ಕಾರಿ ಬಕ್ಕಪ್ಪ ನಾಗೋರೆ ಜೀವನ ಚರಿತ್ರೆ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಕೀರ್ತನೆಗಳು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಹಕಾರಿಯಾಗಿವೆ. ಸನ್ಮಾರ್ಗವನ್ನೂ ತೋರುತ್ತವೆ ಎಂದರು.
ಕನಕದಾಸರು ಶ್ರೇಷ್ಠ ಕಲಿ ಆಗಿದ್ದರು. ಕೀರ್ತನೆ ರಚಿಸಿ, ದೇಶ ಸಂಚಾರ ಮಾಡಿ, ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸದ್ಯದ ಅನೇಕ ಸಮಸ್ಯೆಗಳಿಗೆ ಪುಸ್ತಕಗಳಲ್ಲಿ ಪರಿಹಾರ ಇದೆ. ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಸಂಸ್ಕೃತಿ ಉಳಿಸಿ, ಬೆಳೆಸುವ ಅನಿವಾರ್ಯತೆ ಇದೆ ಎಂದು ನುಡಿದರು.
ಕೃತಿಯ ಪರಿಚಯ ನೀಡಿದ ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ಬಕ್ಕಪ್ಪ ನಾಗೋರೆ ತಮ್ಮ ವೃತ್ತಿ ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಸಹ ಮಾಡಿದ್ದಾರೆ. ಅವರ ಜೀವನ ಚರಿತ್ರೆಯ ಪುಸ್ತಕ ಸಮಾಜ ಸೇವಕರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು. ಸಮಾಜದಲ್ಲಿ ಅನೇಕರು ಎಲೆಮರೆಕಾಯಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಬಕ್ಕಪ್ಪ ನಾಗೋರೆ ಅಂಥವರ ಸಾಲಿಗೆ ಸೇರುತ್ತಾರೆ. ಪುಸ್ತಕದಲ್ಲಿ ಅವರ ಜೀವನ ಮತ್ತು ಸಾಧನೆಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ ಎಂದು ಕೃತಿಯ ಲೇಖಕ ಎಂ.ಜಿ. ಗಂಗನಪಳ್ಳಿ ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಬಕ್ಕಪ್ಪ ನಾಗೋರೆ ಅಧ್ಯಕ್ಷತೆ ವಹಿಸಿ,ಪ್ರಾಮಾಣಿಕ ಸೇವೆ ಸಲ್ಲಿಸುವವರಿಗೆ ಸಮಾಜ ಒಂದಿಲ್ಲೊಂದು ದಿನ ಗುರುತಿಸಿ ಗೌರವಿಸುತ್ತದೆ ಎಂದರು. ಯುವ ಮುಖಂಡ ಪೀರಪ್ಪ ಯರನಳ್ಳಿ, ಅಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾ ಕಾ ಮಲ್ಲಿಕಾರ್ಜುನ, ಮುರಳಿನಾಥ ಮೇತ್ರೆ ಮಾತನಾಡಿದರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ, ಗ್ರಾಪಂ ಸದಸ್ಯ ಸಾಯಿನಾಥ ಗೋರನಳ್ಳಿ, ಪಿಡಿಒ ಶಂಕರರಾವ್, ಪ್ರಮುಖರಾದ ವಿಶ್ವನಾಥ ಸೋಲಪುರ, ಬಿ.ಕೆ. ಚೌಧರಿ, ಪರ್ವತ ರೆಡ್ಡಿ, ಸಂಜೀವಕುಮಾರ ಪಾಟೀಲ, ದಶರಥ ಮೇತ್ರೆ, ಕೆ.ವಿನಯ್ ಪಾಟೀಲ, ವಿಜಯಕುಮಾರ ಪಾಟೀಲ ಇದ್ದರು.