Advertisement
‘ ಈ ಮಾತು ಇಂದಿಗೂ ಸತ್ಯ. ಕನಕದಾಸರು ಅಪಾರ ಜ್ಞಾನಿಗಳು. ಜ್ಞಾನಿಗಳಿಗೆ ಅವರು ಸವಾಲಿನ ರೂಪದಲ್ಲಿ ನೀಡಿದುದೇ ಮುಂಡಿಗೆಗಳು. ಕುರುಬನಾದ ತಮ್ಮ ಜ್ಞಾನದ ಬಗ್ಗೆ ಕನಕದಾಸರು ಅಂದು ವಿದ್ವತ್ ಪ್ರಪಂಚಕ್ಕೆ ಹಾಕಿದ ಸವಾಲುಗಳೇ ಈ ಮುಂಡಿಗೆಗಳು. ಇದು ಕೇವಲ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಲ್ಲ. ಕಾವ್ಯದ ಕುರಿತು ಆಸಕ್ತಿಯುಳ್ಳವರಿಗೆ ಸ್ವಲ್ಪ ತಲೆ ಕೆಡಿಸುವ ಕೆಲಸವೂ ಹೌದು. ಆ ಮೂಲಕ ನಿಗೂಢವಾದ ವಿಚಾರಗಳನ್ನು ಬಿಡಿಸುವ ಹೊಣೆ. ಭಾರತೀಯ ಸಾಹಿತ್ಯದಲ್ಲಿ ಈ ವಿಧದ ನಿಗೂಢತೆಗೆ ಸಾಕಷ್ಟು ಇತಿಹಾಸವಿದೆ.
Related Articles
ಗಂಟಲು ಮೂರುಂಟು ಮೂಗಿಲ್ಲವು
ಕುಂಟ ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಅನ್ನವನು ಭಕ್ಷಿಸುವುದು ||
ಬಡತನವು ಬಂದರೆ ಬಹಳ ರಕ್ಷಿಪುದು, ಕಂಜವದನೆಯರ ಕರದಿ ನಲಿದಾಡುವುದು, ಅಡವಿಯಲಿ ಹುಟ್ಟುವುದು ಅಂಗ ಎರಡಾಗುವುದು ಇತ್ಯಾದಿ ಸಾಲುಗಳು ಈ ಮುಂಡಿಗೆಯ ರಹಸ್ಯವನ್ನು ಅರಿಯಲು ಬೆಳಕು ಚೆಲ್ಲುವಂತಿವೆ. ಈ ಮುಂಡಿಗೆಗೆ ಉತ್ತರ “ಬೀಸುವ ಕಲ್ಲು’. ಅದು ಮನೆಯ ಮೂಲೆಯಲ್ಲಿ ಕುಂಟನಂತಿರುವುದು. ಹೆಂಗಸರು ಇದನ್ನು ಬಳಸಿ ಧಾನ್ಯಗಳನ್ನು ಪುಡಿ ಮಾಡುತ್ತಾರೆ. ಅಡವಿಯಲ್ಲಿ ದೊರೆತ ಒಂದು ಕಲ್ಲು ಇಲ್ಲಿ ಎರಡಾಗಿದೆ.ಅದನ್ನು ಹಿಡಿಯಲು ಒಂದು ಸಣ್ಣ ಮರದ ಗೂಟ. ಅದಕ್ಕೆ ಮೂರು ರಂಧ್ರಗಳು.
ಪುರಾಣಕ್ಕೆ ಸಂಬಂಧಿಸಿದಂತೆ ಕನಕದಾಸರ ಮುಂಡಿಗೆಗಳು ಹಲವು ಇವೆ. ಪುರಾಣ ಲೋಕದ ಜ್ಞಾನವುಳ್ಳವರಿಗೆ ಇದು ಅರ್ಥವಾದೀತು. ಮಂಗಳ ಪದವಾಗಿ ಬಳಸುವ ಒಂದು ಮುಂಡಿಗೆ ಇಂದಿಗೂ ಪ್ರಸಿದ್ಧವಾಗಿದೆ.
Advertisement
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚಂದದಿವಡೆದನ ನಂದನೆಯಳ ನಲ
ವಿಂದಧರಿಸಿದ ಮುಕುಂದಗೆ ||
ಅಂಧಕ ಎಂದರೆ ಧೃತರಾಷ್ಟ್ರ. ಅವನ ತಮ್ಮ ಪಾಂಡು ರಾಜ. ಈತನ ಕಂದ ಧರ್ಮರಾಯ. ಧರ್ಮರಾಯನ ತಂದೆ ಯಮ ಧರ್ಮರಾಯ. ಅವನನ್ನು ಕೊಂದವ ಮೃತ್ಯುಂಜಯ ಅಂದರೆ ಈಶ್ವರ. ಈಶ್ವರನ ತಲೆಯನ್ನೇರಿದವನು ಚಂದ್ರ. ಅವನು ಹುಟ್ಟಿ ಬಂದುದು ಕ್ಷೀರ ಸಮುದ್ರ, ಸಮುದ್ರರಾಜನ ಮಗಳು ಲಕ್ಷ್ಮೀ, ಲಕ್ಷ್ಮೀಯನ್ನು ವರಿಸಿದವನು ವಿಷ್ಣು.ಅನುಭಾವದ ನಿಗೂಢತೆಯನ್ನು ಸಾರುವ ಕೆಲವು ಮುಂಡಿಗೆಗಳನ್ನು ಕನಕದಾಸರು ಬರೆದಿದ್ದಾರೆ. ಮನಸ್ಸಿನ ಸ್ವಭಾವ ಮತ್ತು ಸಾಧನಾ ಪಥದಲ್ಲಿ ಅದನ್ನು ನಿಯಂತ್ರಿಸುವ ಬಗ್ಗೆ ಬರೆದ ಮುಂಡಿಗೆ “ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು’. ಸಂಖ್ಯಾಶಾಸ್ತ್ರದ ಬಲದಲ್ಲಿ ವಿವರಣೆ ನೀಡುತ್ತಾ ಸಾಗುವ ಈ ಮುಂಡಿಗೆಯಲ್ಲಿ ಆರು ತಲೆಗಳ ಉಲ್ಲೇಖವಿದ್ದು ಅವುಗಳು ಆರು ಚಕ್ರವನ್ನು( ಮೂಲಾಧಾರ, ಸ್ವಾದಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜಾ,n ಸಹಸ್ರಾರ). ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಪಂಚಪ್ರಾಣ ಹಾಗೂ ಮನಸ್ಸುಗಳನ್ನು 16 ಕಣ್ಣುಗಳೆಂದು ವರ್ಣಿಸಲಾಗಿದೆ. ಉಸಿರನ್ನು ನಿಯಂತ್ರಿಸುವ ಮೂಲಕ ಮನಸ್ಸನ್ನು ನಿಯಂತ್ರಿಸಲು ಸಲಹೆ ನೀಡುವ ದಾಸರು ಕೊನೆಗೆ ಪರಮಾತ್ಮ ಹಾಗೂ ಜೀವಾತ್ಮ ಬೇರೆ ಬೇರೆ ಎನ್ನುತ್ತಾ ಅಲ್ಲುಂಟು ಇಲ್ಲಿಲ್ಲವೇ? ಎನ್ನುತ್ತಾರೆ. ಬ್ರಹ್ಮಾಂಡದೊಳಗಿರುವುದು ಪಿಂಡಾಂಡದಲ್ಲಿಲ್ಲವೇ? ಎಂಬ ಪ್ರಶ್ನೆ ಎಸೆಯುತ್ತಾರೆ. ಈತನೀಗ ವಾಸುದೇವನು ಕನಕದಾಸರ ಇನ್ನೊಂದು ಪ್ರಸಿದ್ಧ ರಚನೆ. ಇಲ್ಲಿಯೂ ಅನೇಕ ಪೌರಾಣಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ, ಬೇರೆ ಬೇರೆ ಸಂಗತಿಗಳ ಮೂಲಕ ಕೃಷ್ಣನ ಮಹಿಮೆಯನ್ನು ಕೊಂಡಾಡಿದ್ದಾರೆ.
ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನಜ್ಯೇಷ್ಠ ಪುತ್ರಗೆ ವೈರಿ ತೊಡೆಯ ಭೇದಿಸೆಂದು ಬೋಧಿಸಿ ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉತ್ಕೃಷ್ಟ ಮಹಿಮನಾದ ದೇವ ಕಾಣಿರೋ || ಸೃಷ್ಟಿಕರ್ತ ಎಂದರೆ ಬ್ರಹ್ಮ. ಅವನ ಮಗ ಶಿವ. ಶಿವನ ಆಭರಣ ಸರ್ಪ. ಸರ್ಪದ ಆಹಾರ ವಾಯು. ವಾಯುವಿನ ಮಗ ಭೀಮ. ಭೀಮನ ವೈರಿ ಕೌರವ. ಕೌರವನ ತೊಡೆ ಮುರಿಯುವಂತೆ ಬೋಧಿಸಿದವನು ಕೃಷ್ಣ. ದೂರದರ್ಶನದಂಥ ಮಾಧ್ಯಮಗಳು ಬರುವ ಮೊದಲು ಗ್ರಾಮೀಣ ಜನರಲ್ಲಿ ಒಗಟುಗಳು ಜನರ ಬುದ್ಧಿಶಕ್ತಿಗೆ ಸವಾಲಾಗಿದ್ದವು. ಒಗಟು ಮತ್ತು ಅದಕ್ಕೆ ಉತ್ತರ ಒಂದು ವಿಧದಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಕ್ರೀಡೆಯಾಗಿತ್ತು. ಕನಕದಾಸರ ಮುಂಡಿಗೆಗಳೂ ಈ ಹಿನ್ನೆಲೆಯಲ್ಲಿ ಮಹಣ್ತೀವಾದವು. ಆದರೆ ಈಗ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ತಾಳ್ಮೆ ಯಾರಲ್ಲಿದೆ? ಯಂತ್ರಗಳೇ ಎಲ್ಲಾ ವಿಚಾರಗಳಿಗೆ ಗುರುವಾಗಿರುವಾಗ ಇವುಗಳ ಕಷ್ಟ ಏಕೆ ಬೇಕು? ಕನಕದಾಸರಿಗೆ ಇಂದು ಸರಕಾರ ಹಾಗೂ ಸಮಾಜ ಬಹಳ ಗೌರವ ನೀಡುತ್ತಿದೆ. ಅಂದು ಮುಂಡಿಗೆಗಳ ಮೂಲಕ ಕನಕನ ಕೆಣಕಬೇಡ ಎಂಬ ಮಾತು ಹುಟ್ಟಿಕೊಂಡಿತು. ಇಂದು ಅಷ್ಟೇ ಎಚ್ಚರ ಹಾಗೂ ಭಕ್ತಿಯಿಂದ ಕನಕದಾಸರನ್ನು ಕೆಣಕದೇ ಗೌರವಿಸುವುದು ನಮ್ಮ ಕರ್ತವ್ಯ. – ಡಾ.ಶ್ರೀಕಾಂತ್ ಸಿದ್ದಾಪುರ