Advertisement

ಕನಕನೆಂಬ 15ನೇ ಶತಮಾನದ ಹರಿದಾಸ

10:23 PM Nov 10, 2022 | Team Udayavani |

ಕನಕದಾಸ ಸಾಹಿತ್ಯದ ದಿಗ್ಗಜ, ಕನ್ನಡ ಸಾಹಿತ್ಯದ ಚಿನ್ನದ ಗಣಿ, ಜನನಾಯಕನಾಗಿ ದಂಡನಾಯಕನಾಗಿ ಸಾಂಸಾರಿಕ ವೈರಾಗ್ಯಕ್ಕೊಳಗಾಗಿ ಭಕ್ತಿಯೊಂದೆ ಮುಕ್ತಿಗೆ ಮಾರ್ಗವೆಂದು ತನ್ನ ಜೀವನವನ್ನು ಹರಿಭಕ್ತಿಯಲ್ಲಿ ತೊಡಗಿಸಿಕೊಂಡು, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಕನಕರು ಮಾಡಿದ ಪಯತ್ನಗಳು ಇಂದಿಗೂ ಕನಕದಷ್ಟೆ  ಶ್ರೇಷ್ಟವಾದಂಥವು.

Advertisement

ಒಬ್ಬ ಸಂತ ಕವಿ ತನ್ನ ಅಸ್ತಿತ್ವದ ಮುಂದಿನ ಐದುನೂರು ವರ್ಷಗಳ ಅನಂತರವೂ ಸಹಿತ ಸತತವಾಗಿ ನಮ್ಮ ಸಾಮಾಜಿಕ ಬದುಕನ್ನು ಕೆದಕುತ್ತಲೇ ಪ್ರಸ್ತುತವಾಗುತ್ತಾ, ಜತೆಜತೆಗೆ ನಮ್ಮನ್ನು ಗಹನವಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿಂತನೆಯಲ್ಲಿ ತೊಡಗಿಸುತ್ತಿರುವ ಬಗೆ ವಿಸ್ಮಯಕಾರಿ, ಅಷ್ಟೇ ಅಲ್ಲ ಈ ಕ್ರಾಂತಿಕಾರಿ ಸಂತಕವಿ ತನ್ನನ್ನು ತಾನು ಮತ್ತೆ ಮತ್ತೆ ಈ  ಬಗೆಯ ಮರು ಚಿಂತನೆಗೆ, ಮೌಲ್ಯಮಾಪನಕ್ಕೆ ಒಡ್ಡಿಕೊಳ್ಳುವ  ಬಗೆಯಂತೂ ಬಹು ಅನನ್ಯ. ಇದುವೆ ಕನಕದಾಸರ ಶಕ್ತಿ ಮತ್ತು ಸಾಮರ್ಥ್ಯ.

ಕನಕದಾಸರ ವಿಶಿಷ್ಟತೆ ಇರುವುದು ಅವರ ಕೀರ್ತನೆಗಳಲ್ಲಿ, ತಮ್ಮ ಕೀರ್ತನೆಗಳ ಮೂಲಕ ಅಂದಿನ ಹರಿದಾಸ ಪರಂಪರೆಯಲ್ಲಿ ಸುಭದ್ರ ವಾದ ಸ್ಥಾನವನ್ನುಗಳಿಸಿಕೊಂಡಂತೆಯೇ, ತಮ್ಮ ಕಾವ್ಯ ನಿರ್ಮಿತಿ ಯಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ ಹಾಗೂ ಸಮಾನತೆಯನ್ನು ಕಾಪಾಡುವ ಹಾದಿಯಲ್ಲಿ ಉಗಾಭೋಗ, ಉದಯರಾಗ, ಡೊಳ್ಳುಪದ, ಮುಂಡಿಗೆ ಇತ್ಯಾದಿಗಳಲ್ಲದೆ ದ್ವಿಪದಿ, ತ್ರಿಪದಿ, ಚೌಪದಿ, ಷಟ³ದಿ, ಸಾಂಗತ್ಯ ಮುಂತಾದ ವಿವಿಧ ಕಾವ್ಯಶೈಲಿಯಲ್ಲಿ ರಚಿತವಾದ ಕಾವ್ಯಗಳು, ಕನಕರನ್ನು ಕಾವ್ಯ ಶಿಖರದಲ್ಲಿ ಉತ್ತುಂಗಕ್ಕೇರಿಸಿವೆ.

ಎರಡನೆಯದಾಗಿ ಕೀರ್ತನಕಾರರಾದ ಅವರು, ಆ ಸಂಪ್ರದಾಯದ ಇತರರಂತೆ ಕೇವಲ ಮಾಧ್ವಭಕ್ತಿ ಹಾಗೂ ಸಿದ್ಧಾಂತಗಳಿಗೆ ಕಟ್ಟು ಬೀಳದೆ, ಒಂದು ಉದಾರವಾದೀ ಧಾರ್ಮಿಕ ನಿಲುವನ್ನು ಪ್ರಕಟಿಸುವುದು ಪ್ರಶಂಸನೀಯ, ತಾನು ಹುಟ್ಟಿನಲ್ಲಿ ಕುರುಬರು ಎಂಬ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೆ, ತಮ್ಮ ಭಕ್ತಿಯ ನಿಲುವನ್ನು ಬೀರ ದೇವರಿಗೆ ಸಾರುತ್ತಾ ಸತ್ಕುಲಗಳಿಗೆ ದೇವನೊಲಿವನೆಂಬ ಸಿದ್ದಾಂತಗಳನ್ನು ತಲೆಕೆಳಗೆ ಮಾಡಿ “ದೇವನೊಲಿದ ಕುಲವೇ ಸತ್ಕು ಲಂ’ ಎಂದು ತೋರಿಸಿದವರು ಕನಕ ಮಣಿಗಳು.

ಹುಟ್ಟಿಗಂಟಿ ಬಂದ ಜಾತಿಯನ್ನು ತಳ್ಳಿ ಅದರ ವಿರುದ್ದವಾಗಿ ಈಜಿದ ಕನಕರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವುದು ಅಷ್ಟು ಸಮಂಜಸವಲ್ಲ, ದಾಸನಾಗುತ್ತಲೆ “ಕುಲ ಕುಲವೆಂದು ಹೊಡೆದಾಡದಿರು, ಕುಲದ ನೆಲೆಯ ನೀವೇನಾದರು ಬಲ್ಲಿರಾ’ ಎಂದು ಪ್ರಶ್ನಿಸಿದ ಕನಕರ ಜಯಂತಿ ಕೇವಲ ಒಂದು ಜನಾಂಗಕ್ಕೆ ಸೀಮಿತಗೊಳ್ಳುವುದು ಅಷ್ಟು ಸರಿಯಲ್ಲ, ಕನಕದಾಸರು ಯುಗ ಕಂಡ ಅತ್ಯಂತ ಪ್ರಭಾವಶಾಲಿ ಸಾರ್ವಕಾಲಿಕ ಕವಿ.

Advertisement

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ !

ಎಂದು ತಮ್ಮ ಕಾವ್ಯವನ್ನು ರಚಿಸುವ ಮೂಲಕ ಜಾತಿಯೆಂಬ ಸಂಕೋಲೆಗಳನ್ನು ತೆರೆದಿಟ್ಟು ಮಾನವ ಕುಲವೆಂಬುದೊಂದೆ ಎಂದು ಜಗಕ್ಕೆ ಜೀವನದ ತಣ್ತೀನೀತಿಗಳನ್ನು ಸಾರಿದ ಕನಕರು, ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿ. ಆಧ್ಯಾತ್ಮಿಕ ತಣ್ತೀಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನೀಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಸಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿದರು, ಹೀಗೆ ಸಮಾಜ ಸುಧಾರಕರಾಗಿ, ಭಾವಕ್ಯತೆಯನ್ನು ಐದುನೂರು ವರ್ಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.

ಬದುಕನ್ನು ಸ್ವೀಕರಿಸುವುದು ಮೌಲ್ಯವನ್ನು ಎತ್ತಿ ಹಿಡಿಯಲು, ಬದುಕನ್ನು ತಿರಸ್ಕರಿಸುವುದು ಮೌಡ್ಯ-ಕಳಂಕವನ್ನು ನಿವಾರಿಸಲು. ಈ ಎರಡೂ ಸ್ಥಿತಿಗಳನ್ನು ಸಾಧಿಸಿಕೊಂಡ ಕನಕದಾಸರು ಕೇವಲ ಶ್ರೇಷ್ಠ ದಾಸರು ಮಾತ್ರವಲ್ಲ ಒಬ್ಬ ಮಾನವತಾವಾದಿ. ಅವರು ರಚಿಸಿರುವ ನಾಲ್ಕು ಕಾವ್ಯ ಕೃತಿಗಳು ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಹಾಗೂ ಮುಂತಾದ ಕೀರ್ತನೆಗಳನ್ನು ಷಟ³ದಿಯಲ್ಲಿ ರಚಿಸಿದ್ದಾರೆ. ನೂರಾರು ಕೀರ್ತನೆಗಳು ಕನಕದಾಸರ ಈ ಗುಣವಿಶೇಷಣಕ್ಕೆ ಸಾಕ್ಷಿ.

 

-ಎಂ.ಡಿ.ಉಮೇಶ್‌ ಮಳವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next