“ದುನಿಯಾ’ ವಿಜಯ್ ನಾಯಕರಾಗಿರುವ “ಕನಕ’ ಚಿತ್ರಕ್ಕೆ ಮುಹೂರ್ತ ನಡೆದಿರೋದು ನಿಮಗೆ ಗೊತ್ತೇ ಇದೆ. ಆರ್.ಚಂದ್ರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಈಗ ಚಿತ್ರತಂಡ ಚಿತ್ರೀಕರಣಕ್ಕೆ ಅಣಿಯಾಗಿದ್ದು, ಅದಕ್ಕಿಂತ ಮೊದಲು ಫೋಟೋಶೂಟ್ ಮಾಡಲ ಚಂದ್ರು ನಿರ್ಧರಿಸಿದ್ದಾರೆ.
ಸಾಮಾನ್ಯವಾಗಿ ಸಿನಿಮಾಗಳ ಫೋಟೋಶೂಟ್ ಗಳು ಯಾವುದಾದರೂ ಸ್ಟುಡಿಯೋದಲ್ಲಿ ನಡೆಯುತ್ತವೆ. ಆದರೆ ಈ ಬಾರಿ ಚಂದ್ರು ವಿಭಿನ್ನವಾಗಿ ಫೋಟೋಶೂಟ್ ಮಾಡಲು ಪ್ಲ್ರಾನ್ ಮಾಡಿದ್ದಾರೆ. ಅದು ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ. ಹೆಚ್ಚು ಜನ ಸೇರುವ ಮೆಜೆಸ್ಟಿಕ್, ಕಂಟೋನ್ಮೆಂಟ್, ಎಂ.ಜಿ.ರಸ್ತೆ ಸೇರಿದಂತೆ ನಗರದ ಹಲವೆಡೆ “ಕನಕ’ ಚಿತ್ರದ ಫೋಟೋಶೂಟ್ ಮಾಡುವ ಆಲೋಚನೆ ಚಂದ್ರುವಿಗಿದೆ. ಜನವರಿ 24 ರಂದು ಫೋಟೋಶೂಟ್ ನಡೆಯಲಿದ್ದು, ಅದಕ್ಕಾಗಿ ಚಂದ್ರು ತಯಾರಿ ನಡೆಸುತ್ತಿದ್ದಾರೆ.
ಅಷ್ಟಕ್ಕೂ ಈ ತರಹದ ಫೋಟೋಶೂಟ್ ಪ್ಲ್ರಾನ್ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಆಟೋ ಡ್ರೈವರ್ ಪಾತ್ರ. “ಕನಕ’ ಚಿತ್ರದಲ್ಲಿ ವಿಜಯ್ ಆಟೋ ಡ್ರೈವರ್ ಆಗಿ ನಟಿಸುತ್ತಿದ್ದಾರೆ. ಅಲ್ಲಿಗೆ ಇದು ಕೂಡಾ ಕಾಮನ್‌ಮ್ಯಾನ್ ಸಬೆjಕ್ಟ್ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆಟೋ ಡ್ರೈವರ್‌ಗಳು ಬಸ್, ರೈಲ್ವೇ ನಿಲ್ದಾಣಗಳ ಸುತ್ತ ಪ್ರಯಾಣಿಕರಿಗಾಗಿ ಕಾಯುತ್ತಿರುತ್ತಾರೆ. ಹಾಗಾಗಿ, ಫೋಟೋಶೂಟ್ ಸಹಜವಾಗಿ ಮೂಡಿಬರಬೇಕೆಂಬ ಕಾರಣದಿಂದಲೇ “ಕನಕ’ ಚಿತ್ರದ ಫೋಟೋಶೂಟ್ ಅನ್ನು ಜನನಿಬಿಡ ಜಾಗಗಳಲ್ಲಿ ಮಾಡಲು ಚಂದ್ರು ನಿರ್ಧರಿಸಿದ್ದಾರೆ.
ಮೊದಲೇ ಹೇಳಿದಂತೆ ವಿಜಯ್ ಇಲ್ಲಿ ಆಟೋಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಆಟೋಡ್ರೈವರ್ ಗಳ ಮಾತಿನ ಶೈಲಿ, ಅವರ ಮ್ಯಾನರೀಸಂ ಹೇಗಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿಗಮನಿಸುತ್ತಿದ್ದಾರಂತೆ. “ಕನಕ’ ಚಿತ್ರಕ್ಕೆ “ರಾಜ್‌ಕುಮಾರ್ ಅಭಿಮಾನಿ’ ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈಗಗಾಲೇ ಕೆಲವರ ಜೊತೆ ಚಂದ್ರು ಮಾತುಕತೆ ಕೂಡಾ ನಡೆಸಿದ್ದಾರೆ.