ಹಾವೇರಿ: ಕಾಗಿನೆಲೆಯ “ಕನಕ’ ಪರಿಸರ ಸ್ನೇಹಿ ಉದ್ಯಾನವನದ ಬೃಹತ್ ಐದು ಬಂಡೆಗಳ ಮೇಲೆ ಕನಕದಾಸರ ಕಾವ್ಯ, ಕೀರ್ತನೆಗಳ ಸಾರವನ್ನು ಚಿತ್ರದ ಮೂಲಕ ನೋಡುಗರಿಗೆ ಪ್ರದರ್ಶಿಸುವ “ಕನಕ ಕಾವ್ಯ ಗೋಪುರ’ ಸಾಕಾರಗೊಳ್ಳುತ್ತಿದೆ.
ಕಾವ್ಯ, ಕಾದಂಬರಿ, ಕಥೆ, ಕೀರ್ತನೆ ಹೀಗೆ ಪುಸ್ತಕ ಓದುವ ಹವ್ಯಾಸವೇ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿ ಕಾರ ಇಂಥದೊಂದು ವಿಶಿಷ್ಟ ಆಲೋಚನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. ಬಂಡೆಗಳ ಮೇಲೆ ಉಬ್ಬು ಚಿತ್ರಗಳ ಮೂಲಕ ದಾಸಶ್ರೇಷ್ಠರ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಕಾವ್ಯ, ಕೀರ್ತನೆಗಳನ್ನು ಪ್ರಚುರ ಪಡಿಸುವ ಪ್ರಯತ್ನ ನಡೆದಿದೆ.
ಕಾವ್ಯ ಗೋಪುರ: ಒಂದರ ಮೇಲೊಂದರಂತೆ ಜೋಡಿಸಿಟ್ಟಿರುವ ಐದು ಬೃಹತ್ ಬಂಡೆಗಳ ಗೋಪುರದ ಸುತ್ತ ಕನಕರ ಸಾಹಿತ್ಯವನ್ನು ಉಬ್ಬು ಚಿತ್ರದ ಮೂಲಕ ತೋರಿಸಿ, ಜನರಿಗೆ ಸುಲಭವಾಗಿ ಕನಕರ ಸಾಹಿತ್ಯದ ತಿರುಳು ತಿಳಿಸುವ ಕಾರ್ಯಕ್ಕೆ ಕಾಗಿನೆಲೆ ಪ್ರಾ ಧಿಕಾರ ಮುಂದಾಗಿದೆ. ಒಮ್ಮೆ ಬೃಹತ್ ಬಂಡೆಯನ್ನು ಸುತ್ತು ಹಾಕಿದರೆ ಕನಕರ ಅತ್ಯಮೂಲ್ಯ ಕಾವ್ಯ, ಕೀರ್ತನೆಗಳ ಸಾರ ಮನದಲ್ಲಿ ಉಳಿಸುವ ಪ್ರಯತ್ನ ಇದಾಗಿದೆ.
75ಅಡಿ ಎತ್ತರ: ನೈಸರ್ಗಿಕ ಬಣ್ಣದೊಂದಿಗೆ ನೈಜ ಕಲ್ಲಿನ ಬಂಡೆಗಳಂತೆ ಕಾಣುವ ರೀತಿಯಲ್ಲಿ ಸಿಮೆಂಟ್‌ನಲ್ಲಿ ನಿರ್ಮಿಸುವ ಈ “ಕನಕ ಗೋಪುರ’ ಬರೋಬರಿ 75 ಅಡಿ ಎತ್ತರ ಇರಲಿದ್ದು, ಉತ್ಸವ ರಾಕ್ ಗಾರ್ಡನ್‌ನ 25 ಕಲಾವಿದರು ಈ ಉಬ್ಬು ಚಿತ್ರ ಚಿತ್ರಿಸುವ ಕುಸರಿ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಳಗೆ ನಿಂತವರಿಗೂ ಕಾಣುವ ರೀತಿಯಲ್ಲಿ ವಿಶಿಷ್ಟವಾಗಿ ಬೃಹದಾಕಾರವಾಗಿ ಚಿತ್ರಿಸುವ ಆಲೋಚನೆ ಕಲಾವಿದರದ್ದಾಗಿದೆ. ಅಂದಾಜು 50 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕನಕ ಗೋಪುರ ನಿರ್ಮಿಸಲಾಗುತ್ತಿದೆ. ಬಂಡೆಗಳ ಅಡಿಯಲ್ಲಿ ಧ್ಯಾನ ಮಂದಿರ ಸಹ ನಿರ್ಮಿಸಿ ನೋಡುಗರನ್ನು ಆಕರ್ಷಿಸುವ ಕೆಲಸ ಮಾಡಲಾಗುತ್ತಿದೆ.
ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿ ಕಾರ, ಕಾಗಿನೆಲೆಯ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡುತ್ತಲೇ ಬಂದಿದೆ. ಬೃಹತ್ ಕನಕ ಪರಿಸರಸ್ನೇಹಿ ಉದ್ಯಾನದಲ್ಲಿ ಕನಕ ಶಿಲ್ಪವನ, ಸಂಗೀತ ಕಾರಂಜಿ, ಶಂಖನಾದ ಮೊಳಗಿಸುವ ಮಾದರಿಯ ಬೃಹತ್ ಕನಕರ ಕಲಾಕೃತಿ, ವೀಕ್ಷಣಾ ಗೋಪುರ ಪ್ರವಾಸಿಗರಿಗೆ ಆಕರ್ಷಣೀಯವಾಗಿದೆ.
ಕಾಗಿನೆಲೆ ತಾಣದ ಸೌಂದರ್ಯ ಹೆಚ್ಚಿಸಲು ಹಾಗೂ ಕನಕರ ಸಾಹಿತ್ಯದ ತಿರುಳನ್ನು ಜನರಿಗೆ ಚಿತ್ರದ ಮೂಲಕ ಪರಿಚಯಿಸುವ ಉದ್ದೇಶದಿಂದ “ಕನಕ ಗೋಪುರ’ ನಿರ್ಮಿಸಲಾಗುತ್ತಿದೆ. ನಾಲ್ಕೈದು ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಇದರಿಂದ ಕಾಗಿನೆಲೆಯ ಮೆರಗು ಇನ್ನಷ್ಟು ಹೆಚ್ಚಲಿದೆ.
– ಮಲ್ಲೇಶಪ್ಪ ಹೊರಪೇಟೆ, ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ.
– ಎಚ್.ಕೆ. ನಟರಾಜ