ದಾವಣಗೆರೆ/ಹರಿಹರ: ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕಾಗಿನೆಲೆ ಗುರು ಪೀಠದ ಹೊಸ ದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಯವರ ವಾಗ್ವಾದದ ಪ್ರಕರಣ ಸುಖಾಂತ್ಯ ಕಂಡಿದೆ.
ತುಮಕೂರು ಜಿಲ್ಲೆ ಹುಳಿಯಾರಿನಲ್ಲಿ ಕನಕವೃತ್ತಕ್ಕೆ ಸಂಬಂಧಿಸಿದ ವಿವಾದ ತಾರಕಕ್ಕೆ ಏರುತ್ತಿದ್ದಂತೆಯೇ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಜೆ.ಸಿ. ಮಾಧುಸ್ವಾಮಿ ಮಧ್ಯಾಹ್ನ ಬೆಳ್ಳೂಡಿಯಲ್ಲಿರುವ ಕಾಗಿನೆಲೆ ಗುರುಪೀಠ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
ನಮಗೆ ಸಚಿವ ಮಾಧುಸ್ವಾಮಿ ಬಗ್ಗೆ ಕೋಪ ಇತ್ತು. ಆದರೆ ಸಭೆಯಲ್ಲಿ ಭಾವುಕರಾದ ಸಚಿವರ ಕಣ್ಣಂಚಿನಲ್ಲಿ ಕಣ್ಣೀರು ನೋಡಿದೆವು. ನಾಮ ಫಲಕ ವಿಚಾರದಲ್ಲಿ ಯಾವುದೇ ಅಡ್ಡಿ ಮಾಡಬೇಡಿ ಎಂಬುದಾಗಿ ಪೊಲೀಸರಿಗೂ ಹೇಳಿದ್ದಾರೆ. ಹಾಗಾಗಿ ಸಮಸ್ಯೆ ಮುಗಿದಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸಿಎಂ ಯಡಿಯೂರಪ್ಪ ಭರವಸೆ ಮೇರೆಗೆ ಪ್ರತಿಭಟನೆ, ಬಂದ್ ಕರೆ ಸಂಪೂರ್ಣವಾಗಿ ಹಿಂಪಡೆಯಲು ಶ್ರೀಮಠ ತೀರ್ಮಾನಿಸಿದೆ ಎಂದರು.
ನಾನು ಯಾವತ್ತೂ ವೃತ್ತಕ್ಕೆ ಕನಕದಾಸರ ಹೆಸರಿಡಲು ವಿರೋಧ ಮಾಡುವುದಿಲ್ಲ. ಯಾವುದೇ ಜನಾಂಗದ ಸ್ವಾಮೀಜಿಗೂ ಅವಮಾನ ಮಾಡಿಲ್ಲ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ
ಕೆಲವೊಂದು ಗೊಂದಲ ಈ ಪರಿಸ್ಥಿತಿಗೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಮತ್ತು ಸಚಿವ ಮಾಧುಸ್ವಾಮಿಯವರ ನಿಲುವು ಒಂದೇ ಆಗಿದೆ. ಕಾನೂನಾತ್ಮಕವಾಗಿ ಮುಂದೆ ಕ್ರಮ ಕೈಗೊಳ್ಳುತ್ತೇವೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ