Advertisement
ಜಪವ ಮಾಡಿದರೇನು ತಪವ ಮಾಡಿದರೇನೂ, ಕಪಟಗುಣ ವಿಪರೀತ ಕಲುಷ ಇದ್ದವರು. ಆದಿಗುರುವರಿಯದೆ ಅತ್ತಲಿತ್ತಲೂ ತೊಳಲಿ ವೇದಶಾಸ್ತ್ರಗಳ್ಳೋದಿ ಬಾಯಾರಲು ಆದಿಯನು ಕಾಣದಿಂದಿರುತಿದ್ದು, ಹಲವೆಂಟು ವಾದ ತರ್ಕದೊಳಿದ್ದ ಭೇದವಾದಿಗಳು ಎಂದು ತಮ್ಮ ಕೀರ್ತಿನೆಯ ಕಾವ್ಯದಲ್ಲಿ ಡಾಂಭಿಕ ಭಕ್ತರ ನಿಜ ಸ್ವರೂಪವನ್ನು ಬಿಚ್ಚಿ ಗುರು, ಅರಿವು, ಭಕ್ತಿ ಹಾಗೂ ಜೀವನದ ಬಗ್ಗೆ ಜಗತ್ತಿಗೆ ಸಾರಿ ಹೇಳಿದವರು ಕನಕದಾಸರು.
Related Articles
ನಾವು ಹೇಗೆ ಯೋಚನೆ ಮಾಡುತ್ತೇವೋ ಅದರಂತೆಯೇ ಈ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದಕ್ಕೆ ಕನಕದಾಸರು ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೇ, ನೀ ದೇಹದೊಳಗೋ, ನಿನ್ನೊಳು ದೇಹವೋ, ನಯನ ಬುದ್ಧಿಯ ಒಳಗೋ, ಬುದ್ಧಿ ನಯನದ ಒಳಗೋ, ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ ಎನ್ನುತ್ತಾ, ಈ ಕೀರ್ತನೆಯಲ್ಲಿ ಲೋಕದ ಸತ್ಯವಿದೆ. ದೃಷ್ಟಿ ಸರಿ ಇದ್ದಾಗ, ಇಡೀ ಜಗತ್ತು ಹೇಗೆ ನಡೆಯುತ್ತಿದೆಯೇ ಹಾಗೆಯೇ ಕಾಣುತ್ತದೆ. ನೀನು ನಿನ್ನ ಕಣ್ಣಿಗೆ ಕಂಡದ್ದೆ ಸತ್ಯ ಎಂದು ನಂಬಿ ಕುಳಿತೆಯೇ, ಅದರಾಚೆಗಿನ ಪಾರಮಾರ್ಥಿಕ ಸತ್ಯ ನಿನ್ನ ಅರಿವಿಗೆ ಬರಲಾರದು. ಹಾಗಾಗಿ ಕಣ್ಣಿಗೆ ಕಂಡದ್ದನ್ನು, ಬುದ್ಧಿಯ ಮೂಲಕ ಚಿಂತಿಸಿ, ಬುದ್ಧಿಗೆ ಹೊಳೆದದ್ದನ್ನು ಕಣ್ಣಿನ ಮೂಲಕ ನೋಡಿ ಪರಾಂಬರಿಸಿದಾಗ ಸತ್ಯ ತಿಳಿಯುತ್ತದೆ. ಮೊದಲು ನೋಡುವ ದೃಷ್ಟಿ ಬದಲಾಯಿಸಿಕೊಂಡಾಗ, ನಮ್ಮ ಮುಂದಿರುವ ಸುಂದರ ಸೃಷ್ಟಿ ಗೋಚರಿಸುತ್ತದೆ ಎನ್ನುತ್ತಾರೆ ಕನಕದಾಸರು.
Advertisement
ಕನಕರು ಸುಮಾರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಅಲ್ಲದೆ ಸುಳಾದಿ, ಉಗಾಭೋಗಗಳಂತಹ ಸಾಹಿತ್ಯದಲ್ಲಿಯೂ ಇವರ ಕೊಡುಗೆಗಳನ್ನು ಕಾಣಬಹುದು. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿ ಭಕ್ತಿ ಸಾರ, ನೃಸಿಂಹಸ್ತವ (ಉಪಲಬ್ಧವಿಲ್ಲ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರ ರಾಮಧ್ಯಾನ ಚರಿತೆಯಲ್ಲಿ ಅಕ್ಕಿ ಮತ್ತು ರಾಗಿಯ ನಡುವೆ ನಡೆಯುವ ಕುಲದ ಕಲಹ ಮತ್ತು ಅದನ್ನು ಶ್ರೀರಾಮಚಂದ್ರ ಬಗೆಹರಿಸುವ ವಿಧಾನ ಹಾಗೂ ಕುಲ ನಿರ್ಧರಿತವಾಗುವುದು ಬಣ್ಣದಿಂದಲ್ಲ ಬದಲಾಗಿ ಅವುಗಳ ಸಾಮರ್ಥ್ಯದಿಂದ ಎಂಬುದನ್ನು ಸೃಜನಶೀಲವಾಗಿ ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ.
ಸಾಮಾಜಿಕ ಕಟ್ಟುಪಾಡುಗಳ ಹಿನ್ನಲೆಯಲ್ಲಿ ಮತ್ತು ಸದಾ ಕಾಲ ಒತ್ತಡದಲ್ಲಿ ಬದುಕು ನಡೆಸುತ್ತಿರುವ ಇಂದಿನ ಜನಸಮುದಾಯದ ದೃಷ್ಟಿಯಿಂದ ಗಮನಿಸಿದಾಗಲೂ ಕನಕದಾಸರ ಕೀರ್ತನೆಗಳು ತೀರಾ ಅವಶ್ಯವೇ ಸರಿ. ಅವುಗಳ ಒಳಾರ್ಥವನ್ನು ಅರಿತುಕೊಂಡು ಬದುಕಿನಲ್ಲಿ ಕೊಂಚವಾದರೂ ಅಳವಡಿಸಿಕೊಂಡಾಗ ಬದುಕು ಬದಲಾಗುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ
ಭುವನಾ ಬಾಬು, ಪುತ್ತೂರು