“ಮಾಸ್ತಿಗುಡಿ’ ಚಿತ್ರದ ದುರಂತದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಹಾಗೂ ಆ ಚಿತ್ರತಂಡದ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇರಿದ್ದ ನಿಷೇಧವನ್ನು ವಾಪಾಸ್ ಪಡೆದ ವಿಷಯ ನಿಮಗೆ ಗೊತ್ತೇ ಇದೆ. ಇದರಿಂದ ನಿರ್ದೇಶಕ ಆರ್.ಚಂದ್ರು ನಿರಾಳರಾಗಿದ್ದಾರೆ. ಆರ್.ಚಂದ್ರುಗೂ, ಆ ಘಟನೆಗೂ ಏನು ಸಂಬಂಧ ಎಂದು ನೀವು ಕೇಳಬಹುದು. “ಕನಕ’ ಚಿತ್ರ ಮೂಲಕ ಚಂದ್ರು ಹಾಗೂ ವಿಜಯ್ ಒಟ್ಟಾಗಿರೋದೇ ಸಂಬಂಧ.
ಆರ್.ಚಂದ್ರು “ಕನಕ’ ಎಂಬ ಸಿನಿಮಾ ನಿರ್ದೇಶಿಸಲು ಹೊರಟಿರುವ ವಿಷಯ ನಿಮಗೆ ಗೊತ್ತೇ ಇದೆ. ಆ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕರಾಗಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ ರೆಕಾರ್ಡಿಂಗ್ ಕೂಡಾ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕನಕ’ ಯಾವತ್ತೋ ಶುರುವಾಗಬೇಕಿತ್ತು. ಆದರೆ, ಮಂಡಳಿ ನಿಷೇಧ ಹೇರಿದ್ದರಿಂದ ವಿಜಯ್ ಚಿತ್ರೀಕರಣದಲ್ಲಿ ಭಾಗವಹಿಸುವಂತಿರಲಿಲ್ಲ.
ಆದರೆ ಈಗ ನಿಷೇಧ ವಾಪಾಸ್ ಪಡೆದಿದ್ದು, ಚಂದ್ರು ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. “ಕನಕ’ ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಲಿದೆ. ಕೌಶಿಕ್ ಸ್ಟುಡಿಯೋದಲ್ಲಿ ಹಾಕಿರುವ ಸೆಟ್‌ನಲ್ಲಿ ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ದುನಿಯಾ ವಿಜಯ್ ಹಾಗೂ ಇತರ ಕಲಾವಿದರ ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಆ್ಯಕ್ಷನ್ ದೃಶ್ಯ ಸೇರಿದಂತೆ ಚಿತ್ರದ ಇತರ ಪ್ರಮುಖ ಅಂಶಗಳನ್ನು ಚಂದ್ರು ಇಲ್ಲಿ ಚಿತ್ರೀಕರಿಸಿಕೊಳ್ಳಲಿದ್ದಾರೆ.
ಚಿತ್ರೀಕರಣಕ್ಕಾಗಿ ಚಂದ್ರು ಸುಮಾರು 15 ಎಮ್ಮೆಗಳನ್ನು ಮಹಾರಾಷ್ಟ್ರದಿಂದ ತರಿಸುತ್ತಿದ್ದಾರೆ. ಚಿತ್ರದ ದೃಶ್ಯವೊಂದಕ್ಕೆ ಎಮ್ಮೆಗಳ ಅಗತ್ಯವಿರುವುದರಿಂದ ಅಲ್ಲಿಂದ ತರಿಸುತ್ತಿದ್ದಾರೆ. ಇದೊಂದು ಅದ್ಧೂರಿ ಬಜೆಟ್‌ನ ಚಿತ್ರವಾಗಿದ್ದು, ಸ್ವತಃ ಚಂದ್ರು ಅವರೇ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. “ಕನಕ’ಗೆ “ರಾಜ್‌ಕುಮಾರ್ ಫ್ಯಾನ್’ ಎಂಬ ಅಡಿಬರಹ ಕೂಡಾ ಇದೆ. “ಕನಕ’ ಆಟೋ ಡ್ರೆ„ವರ್ ಒಬ್ಬನ ಕಥೆ.
ಆತನೇನು ಡಿಗ್ರಿ ಮಾಡಿದೋನಲ್ಲ. ಓದಿದ್ದು ಕಡಿಮೆಯೇ. ಆದರಾತ ಅಪ್ಪಟವಾಗಿ ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಇಂಥಾ ವ್ಯಕ್ತಿಯ ಲವ್, ಅದರ ಸುತ್ತಲ ಘಟನಾವಳಿಗಳನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಚಂದ್ರು. ವಿಜಯ್ ಅಭಿಮಾನಿಗಳಿಗೆ ಇಷ್ಟವಾಗುವ ಜೊತೆಗೆ ಚಂದ್ರು ಶೈಲಿಯ ಸಿನಿಮಾವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ನವೀನ್ ಸಜ್ಜು ಸಂಗೀತವಿದೆ.