Advertisement

ರೈತರೇ ಮುಚ್ಚಿದ್ರು ಅನಧಿಕೃತ ತೂಬು!

11:34 AM Aug 22, 2019 | Naveen |

ಜಿ.ಚಂದ್ರಶೇಖರಗೌಡ
ಕಂಪ್ಲಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ದೇವಸಮುದ್ರದ ಹತ್ತಿರದ ಎಂ. 1 ವಿತರಣಾ ನಾಲೆಯ ಮೇಲ್ಭಾಗದಲ್ಲಿ ಅನಧಿಕೃತ ನೀರಾವರಿಯಿಂದ ನಾಲೆಯ ಕೊನೆಯಂಚಿನ ಜಮೀನುಗಳಿಗೆ ನೀರು ಹರಿಯದ ಕಾರಣ ಕೆಳಭಾಗದ ಅನೇಕ ರೈತರು ವಿತರಣಾ ನಾಲೆಯಲ್ಲಿರುವ ಅನಧಿಕೃತ ತೂಬುಗಳನ್ನು ಮುಚ್ಚುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

Advertisement

ಸತತ ನೀರಾವರಿ ನಿಯಮದ ಪ್ರಕಾರ ಎಂ. 1 ವಿತರಣಾ ನಾಲೆಯ ವ್ಯಾಪ್ತಿಯಲ್ಲಿ 19 ತೂಬುಗಳ ಮೂಲಕ ಸುಮಾರು 2100 ಎಕರೆಗೆ ನೀರು ಹರಿಸಬೇಕು. ಆ. 11ರಂದು ಟ್ರೀಪ್ಲಾನ್‌ ಪ್ರಕಾರ ವಿತರಣಾ ನಾಲೆಗೆ 42 ಕ್ಯೂಸೆಕ್‌ ನೀರನ್ನು ಹರಿಸಿದರೂ ಇದುವರೆಗೂ ನಾಲೆಯ 2, 5 ಮೈಲಿಯವರೆಗೆ ಮಾತ್ರ ನೀರು ಹರಿದಿದೆ. ನಿಯಮದ ಪ್ರಕಾರ ಮೇಲ್ಭಾಗದ ರೈತರು ಬೇಸಿಗೆ ಬೆಳೆಗೆ ಮಾತ್ರ 600 ಎಕರೆಗೆ ಮಾತ್ರ ನೀರನ್ನು ಪಡೆಯಬೇಕಿತ್ತು. ಆದರೆ ಕಾಲುವೆ 0 ಕೇಂದ್ರದಿಂದ 1.900. ಮೈಲಿನ ವ್ಯಾಪ್ತಿಯ ರೈತರು ವಿತರಣಾ ನಾಲೆಗೆ ಅಕ್ರಮವಾಗಿ ಪೈಪ್‌ಲೈನ್‌ ಅಳವಡಿಸಿಕೊಂಡು ನೀರನ್ನು ಅನಧಿಕೃತವಾಗಿ ಬಳಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಜಮೀನುಗಳಲ್ಲಿ ಅನಧಿಕೃತವಾಗಿ ನೀರು ಬಳಸುವ ಜೊತೆಗೆ ಕೆರೆ ಬಾವಿಗಳನ್ನು ತೋಡಿ ನೀರನ್ನು ಸಂಗ್ರಹಿಸುವ ಮೂಲಕ ನೂರಾರು ಎಕರೆಗೆ ನೀರನ್ನು ಬಳಸುವುದರಿಂದ ವಿತರಣಾ ನಾಲೆಯ ಕೆಳ ಭಾಗದ ಕೊನೆಯಂಚಿನ ಸುಮಾರು 2 ಸಾವಿರ ಎಕರೆ ಪ್ರದೇಶ ಅಧಿಕೃತ ನೀರಾವರಿಯಿಂದ ವಂಚಿತವಾಗಿದೆ ಎಂದು ಅನೇಕ ರೈತರು ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಎಚ್ಚರಿಕೆ: ಎಂ 1 ವಿತರಣಾ ನಾಲೆ ದುರಸ್ತಿ ಕಾಮಗಾರಿಗೆ ನಿಗದಿಪಡಿಸಿದ 32.11 ಲಕ್ಷರೂಗಳಲ್ಲಿ ಕೇವಲ 50 ಸಾವಿರ ರೂಗಳನ್ನು ವ್ಯಯಿಸಿ ಜಂಗಲ್ ಕಟಿಂಗ್‌, ಹೂಳನ್ನು ಕೇವಲ ಕೆಲವೇ ಭಾಗದಲ್ಲಿ ತೆರವುಗೊಳಿಸಿದ್ದಾರೆ. ಬಾಕಿ ಮೊತ್ತದಲ್ಲಿ ನಾಲೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಕೂಡಲೇ ನಾಲೆಗೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸದಿದ್ದಲ್ಲಿ ಎಲ್ಎಲ್ಸಿಯ ಎಂ.1 ವಿತರಣಾ ನಾಲೆಯನ್ನು ಮುಚ್ಚಿ ಪ್ರತಿಭಟನೆ ನಡೆಸುವುದಾಗಿ ಎಂ.1. ವಿತರಣಾ ನಾಲೆಯ ಸತತ ನೀರಾವರಿ ರೈತ ಸಂಘದ ಅಧ್ಯಕ್ಷ ಜಿ.ರಾಮರಾವ್‌, ಕಾರ್ಯದರ್ಶಿ ಕೆ. ಪೂರ್ಣಚಂದ್ರರಾವು, ಖಜಾಂಚಿ ಶ್ರೀನಿವಾಸ್‌, ಮುಖಂಡರಾದ ಟಿ. ಸೋಮಿರೆಡ್ಡಿ, ಕೆ. ಕೃಷ್ಣಯ್ಯ, ಶ್ರೀನಿವಾಸ್‌, ಎಂ.ನಾರಾಯಣ, ಅಂಜಿನಿ, ಹನುಮಯ್ಯ, ಹೊನ್ನೂರಪ್ಪ ಸೇರಿ ಇತರರು ಅಧಿಕಾರಿಗಳನ್ನು ಎಚ್ಚರಿಸಿದರು.

ಸತತ ನೀರಾವರಿ ಎಂದು ಅಕ್ರಮವಾಗಿ ನೀರು ಬಳಕೆ: ದೇವಸಮುದ್ರ ಭಾಗದ ಅನೇಕ ರೈತರು ಈ ಬಗ್ಗೆ ಮಾತನಾಡಿ ಎಂ.1 ವಿತರಣಾ ನಾಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೇ ತೂಬುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದರಲ್ಲಿ ಮಾತ್ರ ರೈತರು ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀರಾವರಿ ಹಾಗೂ ಪೊಲೀಸ್‌ ಅಧಿಕಾರಿಗಳು ಅನಧಿಕೃತ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿದ ಮೇಲೆ ಈ ಭಾಗದಲ್ಲಿ ನಮ್ಮ ಜಮೀನಿನ ಪಕ್ಕದಲ್ಲಿಯೇ ಸಾಕಷ್ಟು ನೀರು ಹರಿದರೂ ನೀರನ್ನು ಬಳಸಿಕೊಳ್ಳುತ್ತಿಲ್ಲ, ಆದರೂ ಕೆಳಭಾಗದ ಅನೇಕ ರೈತರು ವೃಥಾ ಆರೋಪ ಮಾಡುತ್ತಿದ್ದಾರೆ. ಸತತ ನೀರಾವರಿ ಎಂದು ಹೇಳುವ ಅನೇಕ ರೈತರೇ ಆಚ್ಚುಕಟ್ಟಿನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಾವರಿ ಜಮೀನಿದ್ದರೂ ಸಹಿತ ನೂರಾರು ಎಕರೆ ಜಮೀನಿಗೆ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ನಮಗೆ ಎಚ್ಎಲ್ಸಿ ಕಾಲುವೆಯಿಂದ ನಮ್ಮ ಜಮೀನುಗಳಿಗೆ ನೀರನ್ನು ಒದಗಿಸಬೇಕೆಂದು ಆದೇಶ ಇದ್ದರೂ ಸಹಿತ ನೀರಾವರಿ ಇಲಾಖೆ ಅಧಿಕಾರಿಗಳು ನಮಗೆ ನೀರಿನ ಸೌಲಭ್ಯವನ್ನು ಒದಗಿಸಿಕೊಡುತ್ತಿಲ್ಲ ಇದರಿಂದ ನಮಗೆ ನೀರಿದ್ದರೂ ನಾವು ಜಮೀನುಗಳನ್ನು ಬೀಳು ಬಿಡುವ ಪರಿಸ್ಥಿತಿ ಇದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next