ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದ ರಸ್ತೆ ಪಕ್ಕದ ಎಲ್ಲೆಂದರಲ್ಲಿ ಕಸದ ರಾಶಿಗಳ ತಿಪ್ಪೆಗುಂಡಿಗಳು ರಾರಾಜಿಸುವ ಜತೆಗೆ ಹಂದಿಗಳ ಹಾವಳಿಯಿಂದ ಸ್ವಚ್ಛತೆ ಮಾಯವಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಇಲ್ಲಿನ ಸರ್ಕಾರಿ ಪ್ರೌಢಶಾಲೆ ಬಳಿಯ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ತಿಪ್ಪೆಗುಂಡಿಗಳ ನ್ನೊಳಗೊಂಡ ಘನತ್ಯಾಜ್ಯ ವಿಲೇವಾರಿ ಇಲ್ಲದೇ, ಹಂದಿಗಳ ಉಪಟಳಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ರಸ್ತೆ ಮಧ್ಯದಲ್ಲಿ ಓಡಾಡುವ ಪಾದಚಾರಿ ಹಾಗೂ ವಾಹನ ಸವಾರರು ಮೂಗಿಗೆಗೆ ಬಟ್ಟೆ ಕಟ್ಟಿಕೊಂಡು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಈಗಾಗಲೇ ದೇಶದಲ್ಲಿ ಕಿಲ್ಲರ್ ಕೊರೊನಾ ವೈರಸ್ ಭೀತಿಯಲ್ಲಿ ಜನರು ತಲ್ಲಣವಾಗಿರುವುದು ಒಂದು ಕಡೆಯಾದರೆ, ಮತ್ತೊಂದು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘನತ್ಯಾಜ್ಯ ವಿಲೇವಾರಿ ಮಾಡದೇ ಹಾಗೇ ಬಿಟ್ಟಿರುವುದರಿಂದ ನಾನಾ ಸಾಂಕ್ರಾಮಿಕ ರೋಗಗಳಿಗೆ ಪುಷ್ಠಿ ನೀಡುವಂತಾಗಿದೆ. ಸರ್ಕಾರ ಸ್ವಚ್ಛತೆಗಾಗಿ ಗ್ರಾಪಂಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ, ಗ್ರಾಪಂ ಅಧಿಕಾರಿಗಳು ಸ್ವತ್ಛತೆ ಕಡೆಗೆ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಮುಂಭಾಗದ ರಸ್ತೆ, ಬಸ್ ನಿಲ್ದಾಣ ಬಳಿಯ ಹೊಸಪೇಟೆಗೆ ತೆರಳುವ ರಸ್ತೆ ಬದಿಯಲ್ಲಿ ತಿಪ್ಪೆಗುಂಡಿ ತಲೆ ಎತ್ತಿವೆ. ಕಸ, ಸಗಣಿ ತಿಪ್ಪೆಗಳ ದುರ್ವಾಸನೆ ಮಧ್ಯದಲ್ಲಿ ಇಲ್ಲಿನ ಶಾಲೆಗಳಿಗೆ ದಿನನಿತ್ಯದಲ್ಲಿ ಮಕ್ಕಳು ತೆರಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹಂದಿಗಳ ಹಾವಳಿಯಿಂದ ಕಸದ ರಾಶಿಯು ಎಲ್ಲೆಂದರಲ್ಲಿ ಹಬ್ಬುವಂತಾಗಿದೆ.
ಜೊತೆಗೆ ಗ್ರಾಮದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ಗ್ರಾಮದ ಓಣಿಗಳಲ್ಲಿ ಎಲ್ಲೆಂದರಲ್ಲಿ ನಿರ್ಭಯವಾಗಿ ಸಂಚರಿಸುತ್ತಿವೆ. ಈಗಲಾದರೂ ಗ್ರಾಪಂ ಅಕಾರಿಗಳು ಎಚ್ಚೆತ್ತು ರಸ್ತೆ ಬಳಿ ಹಾಕಿರುವ ತಿಪ್ಪೆಗುಂಡಿ ತೆರವುಗೊಳಿಸುವ ಮೂಲಕ ಸ್ವಚ್ಚತೆ ಕಾಪಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ .