Advertisement

ಆಹಾರ-ನೀರು ಅರಸಿ ಗುಳೆ ಬಂದ್ವು ಜಾನುವಾರುಗಳು

11:09 AM Jun 09, 2019 | Naveen |

ಜಿ.ಚಂದ್ರಶೇಖರಗೌಡ
ಕಂಪ್ಲಿ:
ಈ ಬಾರಿಯ ಭೀಕರ ಬರಗಾಲ ತಾಲೂಕಿಗೆ ತಟ್ಟಿದೆ. ಆದರೂ ನೀರಾವರಿ ಪ್ರದೇಶವೆಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಆಹಾರ, ನೀರು ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ.

Advertisement

ಬರಕ್ಕೆ ಮತ್ತೂಂದು ಹೆಸರಾದ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮಗಳ ಸಾವಿರಾರು ಜಾನುವಾರುಗಳು ಕಂಪ್ಲಿ ಭಾಗದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಕೆರೆಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಕಂಪ್ಲಿ ಭಾಗದಲ್ಲಿ ಈಗಾಗಲೇ ಹಿಂಗಾರು ಹಂಗಾಮಿನ ಭತ್ತದ ಕಟಾವು ಬಹುತೇಕ ಮುಕ್ತಾಯಗೊಂಡಿದ್ದು, ಈ ಭತ್ತದ ಗದ್ದೆಯಲ್ಲಿ ಕಟಾವಿನ ನಂತರ ಉಳಿದ ಭತ್ತದ ಹುಲ್ಲು ಹಾಗೂ ಅಲ್ಲಲ್ಲಿ ಕಂಡು ಬರುವ ಹಸಿರು ಹುಲ್ಲನ್ನು ಮೇಯಲು ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ಜಾನುವಾರುಗಳು ಮಾಲೀಕರೊಂದಿಗೆ ಈ ಭಾಗಕ್ಕೆ ಬಂದಿವೆ.

ಸುಮಾರು 2ರಿಂದ 3 ತಿಂಗಳು ಕಂಪ್ಲಿ ಭಾಗದಲ್ಲಿಯೇ ಜಾನುವಾರುಗಳನ್ನು ಬೀಡು ಬಿಡುವ ಮಾಲೀಕರು ಹಗಲೆಲ್ಲಾ ಇಲ್ಲಿನ ವಿವಿಧ ಜಮೀನುಗಳಲ್ಲಿ ಜಾನುವಾರುಗಳನ್ನು ಮೇಯಿಸುವ ಅವರು ರಾತ್ರಿಯಾಗುತ್ತಲೇ ಗ್ರಾಮದ ಸಮೀಪದಲ್ಲಿಯೇ ಬೀಡು ಬಿಟ್ಟು ಹಸುಗಳ ಹಾಲನ್ನು ಕರೆದು ಸಮೀಪದಲ್ಲಿರುವ ಗ್ರಾಮದಲ್ಲಿ ಅವಶ್ಯವಿರುವವರಿಗೆ ಮಾರಿ ಅದರಿಂದ ಬರುವ ಹಣದಲ್ಲಿಯೇ ತಮ್ಮ ದೈನಂದಿನ ಜೀವನ ಸಾಗಿಸುತ್ತಾ ಕಾಲ ಕಳೆಯುತ್ತಾರೆ.

ಕೊಪ್ಪಳದಲ್ಲಿ ಮಳೆಗಾಲದಲ್ಲಿ ಮಾತ್ರ ಉತ್ತಮ ಮಳೆಯಾದರೆ ಜಾನುವಾರುಗಳಿಗೆ ಹುಲ್ಲು ಹಾಗೂ ನೀರು ಸಿಗಲಿದ್ದು, ಬೇಸಿಗೆ ಕಾಲದಲ್ಲಿ ಮೇವಿನ ಜತೆಗೆ ನೀರಿನ ಅಭಾವವು ಕಾಡಲಿದ್ದು, ಕಂಪ್ಲಿ ಭಾಗದಲ್ಲಿ ಹಸಿರು ಹುಲ್ಲು ಹಾಗೂ ನೀರು ಸಮೃದ್ಧವಾಗಿರುವುದರಿಂದ ಬೇಸಿಗೆ ಕಾಲದ ಸುಮಾರು ಮೂರು ತಿಂಗಳು ಕಾಲ ಈ ಭಾಗಕ್ಕೆ ಬರುತ್ತೇವೆ. ಮಳೆಗಾಲ ಶುರುವಾದರೆ ಪುನಃ ಗ್ರಾಮಗಳಿಗೆ ಹಿಂತಿರುಗುತ್ತೇವೆ ಎನ್ನುವ ಕೊಪ್ಪಳ ಜಿಲ್ಲೆ ಬೂದಗುಂಪ ಭಾಗದ ಅನೇಕ ಹಳ್ಳಿಗಳಿಂದ ಬಂದಿರುವ ಯಮನಪ್ಪ, ಯಂಕಪ್ಪ ಹಾಗೂ ಪಂಪಣ್ಣ ಹಾಗೂ ಇತರರು ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಈ ಭಾಗಕ್ಕೆ ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತೇವೆ.

ಈ ಭಾಗದ ರೈತರು ನಿಜಕ್ಕೂ ಯಾವುದೇ ತೊಂದರೆ ನೀಡುತ್ತಿಲ್ಲ. ಉತ್ತಮ ಸಹಕಾರ ನೀಡುತ್ತಿದ್ದಾರೆ. ಯಾಕೆಂದರೆ ಈ ಭಾಗದ ರೈತರ ಜಮೀನುಗಳಲ್ಲಿ ಬೀಡು ಬಿಡುವ ಜಾನುವಾರುಗಳಿಂದ ಸಗಣಿ, ಗಂಜಲ ಬೀಳುವುದರಿಂದ ಜಮೀನುಗಳಿಗೂ ಗೊಬ್ಬರ ಸಿಗುತ್ತದೆಯಾದ್ದರಿಂದ ಇಲ್ಲಿ ನಮಗೆ ಯಾವ ತೊಂದರೆಯೂ ಇಲ್ಲ ಜತೆಗೆ ಜಾನುವಾರುಗಳನ್ನು ಜಮೀನುಗಳಲ್ಲಿ ಬೀಡು ಬಿಡುವುದರಿಂದ ಜಮೀನಿನ ಮಾಲೀಕರು ಅಲ್ಪ ಸ್ವಲ್ಪ ಹಣ ನೀಡುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವರ್ಷ ಕಂಪ್ಲಿ ಭಾಗದಲ್ಲಿಯೂ ಸಹಿತ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಈ ಭಾಗದಲ್ಲಿ ಇದೀಗ ನೀರು ಮತ್ತು ಮೇವಿನ ಕೊರತೆಯಾಗಿರುವುದರಿಂದ ನಾವು ಯಾವ ಕಡೆ ಹೋಗಬೇಕೆನ್ನುವುದು ತಿಳಿಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜಾನುವಾರುಗಳು ಆಹಾರ ಹಾಗೂ ನೀರನ್ನು ಅರಸಿ ಕಂಪ್ಲಿ ಭಾಗಕ್ಕೆ ಗುಳೆ ಬಂದಿವೆ. ದುರಾದೃಷ್ಟವಶಾತ್‌ ಈ ವರ್ಷ ಕಂಪ್ಲಿ ಭಾಗದಲ್ಲಿ ಇದುವರೆಗೂ ಒಂದು ಮಳೆಯೂ ಆಗಲ್ಲ. ಮಳೆ ಆರಂಭವಾಗುತ್ತಿದ್ದಂತೆಯೇ ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ಕೂಲಿ ಕೆಲಸವಿಲ್ಲವೆಂದು ವಿವಿಧ ಗ್ರಾಮಗಳ ಜನತೆ ಬೇರೆ ಊರುಗಳಿಗೆ ಕೂಲಿ ಕೆಲಸಕ್ಕಾಗಿ ಗುಳೆ ಹೋಗುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ಸಾವಿರಾರು ಜಾನುವಾರುಗಳು ಈ ಭಾಗಕ್ಕೆ ಗುಳೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next