Advertisement

ಬೀದಿ ಬದಿ ವ್ಯಾಪಾರಿಗಳಿಗೂ ಸ್ಮಾರ್ಟ್‌ ಕಾರ್ಡ್‌

11:35 AM Jul 15, 2019 | Naveen |

ಜಿ.ಚಂದ್ರಶೇಖರಗೌಡ
ಕಂಪ್ಲಿ:
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀದಿ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ನೆರವಾಗಲು ಪುರಸಭೆಯವರು ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಣೆ ಮಾಡಲು ಮುಂದಾಗಿದ್ದು, ಇದರಿಂದ ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.

Advertisement

ಪಟ್ಟಣದಲ್ಲಿ 410ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿದ್ದಾರೆ. ಈ ಪೈಕಿ 267 ವ್ಯಾಪಾರಿಗಳು ರಸ್ತೆ ವ್ಯಾಪಾರಿಗಳ ಸಂಘದ ಸದಸ್ಯತ್ವವನ್ನು ಪಡೆದಿದ್ದಾರೆ. ಇವರಿಗೆ ಪುರಸಭೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಿದ ನಂತರ ನಿತ್ಯ ವ್ಯಾಪಾರಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ, ಸಬ್ಸಿಡಿ ಸಾಲ, ವಿವಿಧ ಇಲಾಖೆಗಳ ಸೌಕರ್ಯಗಳು, ಮಕ್ಕಳ ಶಾಲಾ ಶುಲ್ಕ, ಹಾಸ್ಟೆಲ್ ವ್ಯವಸ್ಥೆಗೆ ವಿಶೇಷ ವಿನಾಯಿತಿ ಸಿಗಲಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಕಾರ್ಡುಗಳನ್ನು ಪಡೆಯಲು ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಉತ್ಸುಕರಾಗಿದ್ದಾರೆ.

ಸ್ಮಾರ್ಟ್‌ ಕಾರ್ಡ್‌ ವಿತರಣೆ ಉದ್ದೇಶ: ಸ್ಮಾರ್ಟ್‌ ಕಾರ್ಡ್‌ ಪಡೆಯುವ ಬೀದಿ ಬದಿ ವ್ಯಾಪಾರಸ್ಥರು ಕಾಯಂ ವ್ಯಾಪಾರಿಗಳಾಗಿ ಗುರುತಿಸಲ್ಪಡುತ್ತಾರೆ. ಸಾರ್ವಜನಿಕರು, ಪೊಲೀಸರಿಗೆ ಇವರು ಅಧಿಕೃತ ವ್ಯಾಪಾರಿಗಳು ಎನ್ನುವುದು ಗೊತ್ತಾಗುತ್ತದೆ. ಫಲಾನುಭವಿಗಳು ಬೇರೆ ಬೇರೆ ಊರುಗಳ ಸಂತೆಯಲ್ಲಿ ನಿರಾಂತಕವಾಗಿ ವ್ಯಾಪಾರ ಮಾಡಬಹುದಾಗಿದೆ. 99ರೂಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆಗೆ ಎನ್‌ಜಿಒಗೆ ಗುತ್ತಿಗೆ ನೀಡಲಾಗಿದ್ದು, ಎನ್‌ಜಿಒ ಪುರಸಭೆಯವರು ಅನುದಾನ ನೀಡಿದ ಬಳಿಕ ವ್ಯಾಪಾರಿಗಳಿಗೆ ಹಣ ವಾಪಸ್‌ ಸಿಗಲಿದೆ.

ಜೀವನೋಪಾಯಕ್ಕೆ ಸುಪ್ರೀಂ ಅಸ್ತು: 2000ರಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಅವಶ್ಯಕ ವ್ಯಕ್ತಿಗಳು ಎಂದು ಪರಿಗಣಿಸಿದ ಸುಪ್ರೀಂಕೋರ್ಟ್‌ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಗೆಜೆಟ್ ಪಾಸ್‌ ಮಾಡಿತ್ತು. ಇದರ ಅನ್ವಯ ರಸ್ತೆ ಬದಿ ವ್ಯಾಪಾರಿ ಜೀವನ ಭದ್ರತೆಗೆ ಗುರುತಿನ ಚೀಟಿ, ಪ್ರಮಾಣ ಪತ್ರ ವಿತರಿಸಿ ಆರ್ಥಿಕ ನೆರವು ನೀಡುವಂತೆ ಆದೇಶ ಹೊರಡಿಸಿತು. ಇದರಂತೆ ರಾಜ್ಯ ಸರ್ಕಾರ ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ರಸ್ತೆ ಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿಯಲ್ಲಿ ಸಾಲ ಸೌಕರ್ಯ ಒದಗಿಸುತ್ತಿದೆ. ಇವರ ಅಭಿವೃದ್ಧಿಗೆ 7.16.ಕೋಟಿ ರೂ. ಬಿಡುಗಡೆಗೊಳಿಸಿದೆ. ಕೇಂದ್ರದ ಬಜೆಟ್‌ನಲ್ಲಿಯೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತಿಂಗಳಿಗೆ 8 ಪೈಸೆ ಬಡ್ಡಿ ದರದಲ್ಲಿ 1ಲಕ್ಷರೂ. ಸಾಲ ವಿತರಣೆ ಘೋಷಣೆ ಮಾಡಲಾಗಿದೆ.

ಭಾವಚಿತ್ರದೊಂದಿಗೆ 27 ದಾಖಲೆ ಸಲ್ಲಿಸಿ
ಸ್ಮಾರ್ಟ್‌ ಕಾರ್ಡ್‌ ಪಡೆಯಲು ವ್ಯಾಪಾರಿ ಹಾಗೂ ಅವರ ಕುಟುಂಬದ ಸದಸ್ಯರ ಭಾವಚಿತ್ರದ ಜೊತೆಗೆ ಪುರಸಭೆಗೆ ಒಟ್ಟು 27 ದಾಖಲೆಗಳನ್ನು ಸಲ್ಲಿಸಬೇಕು. ಮೂಲ ಫಲಾನುಭವಿ ಆಕಸ್ಮಿಕವಾಗಿ ಮೃತಪಟ್ಟರೆ,ಅವರ ಕುಟುಂಬದ ಒಬ್ಬರು ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿದೆ. ಸ್ಮಾರ್ಟ್‌ ಕಾರ್ಡ್‌ ಗುರುತಿನ ಚೀಟಿಯಾಗಿಯೂ ನೆರವಾಗಲಿದೆ. ನಕಲಿ ಫಲಾನುಭವಿಗಳಿಗೆ ಕಡಿವಾಣ ಹಾಕಲು ಡಿ-ಕೋಡಿಂಗ್‌ ಸಿಸ್ಟಂ ಮೂಲಕ ಕಾರ್ಡ್‌ಗಳನ್ನು ತಯಾರಿಸಲಾಗಿದೆ.

Advertisement

ಪಟ್ಟಣದ 267 ರಸ್ತೆ ಬದಿ ವ್ಯಾಪಾರಿಗಳಿಗೆ ಶೀಘ್ರವಾಗಿ ಸ್ಮಾರ್ಟ್‌ ಕಾರ್ಡುಗಳನ್ನು ವಿತರಿಸಲಾಗುವುದು. ಅರ್ಹ ಫಲಾನುಭವಿಗಳು ಪುರಸಭೆ ಕಚೇರಿಯಲ್ಲಿ ಸರ್ವೆ ಅರ್ಜಿಗಳನ್ನು ಭರ್ತಿಮಾಡಿ ದಾಖಲೆಗಳನ್ನು ನೀಡಬೇಕು. ಬಳಿಕ ಮನೆ ಮನೆಗೆ ತೆರಳಿ ನೋಂದಣಿ ಕೈಗೊಳ್ಳಲಾಗುವುದು.
ಎಂ.ವಸಂತಮ್ಮ,
ಪುರಸಭೆ ಸಮುದಾಯ ಸಂಘಟಕಿ

ಕಂಪ್ಲಿಯಲ್ಲಿ 3 ವರ್ಷಗಳ ಹಿಂದೆ ಕೇವಲ 160 ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯತ್ವ ಪಡೆದಿದ್ದರು. ಪ್ರಸ್ತುತ 267 ವ್ಯಾಪಾರಿಗಳು ಸಂಘಕ್ಕೆ ಒಳಪಟ್ಟಿದ್ದಾರೆ.ಇನ್ನು 200ಕ್ಕೂ ಹೆಚ್ಚು ವ್ಯಾಪಾರಿಗಳು ಸದಸ್ಯತ್ವ ಪಡೆಯಬೇಕಿದೆ. ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಹಣ್ಣಿನ ನಾಗರಾಜ,
ರಸ್ತೆ ಬದಿ ವ್ಯಾಪಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next