ಕಂಪ್ಲಿ: ಮಳೆ ಬಂದರೆ ಸಾಕು ಸೋರುವ ಮೇಲ್ಛಾವಣಿ, ಶಿಥಿಲಾವಸ್ಥೆಯಲ್ಲಿರುವ ಗೋಡೆಗಳು, ಕೊಠಡಿಯಲ್ಲಿ ಸದಾ ಕತ್ತಲು, ಪ್ರಾಣ ಭಯದ ನಡುವೆ ಮಕ್ಕಳ ಆಠ ಪಾಠ! ಇದು ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ಆರ್. ಕೊಂಡಯ್ಯಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಇಂದಿನ ದುಃಸ್ಥಿತಿ.
1997ರಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡ ಸದ್ಯ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಗೋಡೆಗಳು ಅಲ್ಲಲ್ಲಿ ಬಿರುಕುಬಿಟ್ಟಿವೆ. ವಿಶೇಷವಾಗಿ ಕಟ್ಟಡದ ಒಂದು ಭಾಗದ ಗೋಡೆಯಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಕಟ್ಟಡವು ನೆಲಮಟ್ಟಕ್ಕಿಂತ ಒಂದಡಿ ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ಹೊರಗಿನ ನೀರೆಲ್ಲ ಒಳ ನುಗ್ಗುತ್ತದೆ. ಅಡುಗೆ ಗೋಡೆ ತುಂಬಾ ಸಣ್ಣದ್ದಿದ್ದು, ಒಬ್ಬರು ನಿಲ್ಲುವಷ್ಟು ಸ್ಥಳವಿಲ್ಲ. ದಾಸ್ತಾನು ಕೊಠಡಿಯೂ ವಿಶಾಲವಾಗಿಲ್ಲ, ಉಳಿದ ಸ್ಥಳದಲ್ಲಿ ಮಕ್ಕಳು ಕೂಡಬೇಕು. ಮಲಗಬೇಕು ಅಂಥ ಪರಿಸ್ಥಿತಿ ಇಲ್ಲಿ ದೈನಂದಿನ ದೃಶ್ಯವಾಗಿದೆ.
ಪ್ರಸ್ತುತ ಈ ಕೇಂದ್ರದಲ್ಲಿ 0-6 ವರ್ಷದ 52 ಮಕ್ಕಳು ನೋಂದಣಿಯಾಗಿದ್ದು, ಅದರಲ್ಲಿ 3-5 ವರ್ಷದ 30 ಮಕ್ಕಳಿದ್ದು, ನಿತ್ಯ 25ರಿಂದ 30 ಮಕ್ಕಳು ಕೇಂದ್ರಕ್ಕೆ ಬರುತ್ತಾರೆ. 11-18 ವರ್ಷದ 22 ಕಿಶೋರಿಯರು ಮತ್ತು 7 ಗರ್ಭಿಣಿಯರು, ಒಬ್ಬ ಬಾಣಂತಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಅವರ ಪೌಷ್ಟಿಕ ಆಹಾರ ದಾಸ್ತಾನು ಮಾಡಲು ಕೇಂದ್ರದಲ್ಲಿ ಸ್ಥಳದ ಸಮಸ್ಯೆ ಇದೆ. ಅಂಗನವಾಡಿ ಕೇಂದ್ರದ ಶಿಥಿಲ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮದ ಮುಖಂಡರಾದ ಕೃಷ್ಣಪ್ಪ, ಸಂಧ್ಯಾರಾಣಿ ಮನವಿ ಮಾಡಿದ್ದಾರೆ.
ಶಾಸಕ ಜೆ.ಎನ್. ಗಣೇಶ್ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿ ದ್ದಾರೆ. ಅಂಗನವಾಡಿ ಶಿಥಿಲಾವಸ್ಥೆ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ಎಂ.ವಿ.ಪದ್ಮಾವತಿ ತಿಳಿಸಿದರು.
ಅಡುಗೆ ಕೋಣೆ, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಮನರೇಗಾ ಯೋಜನೆಯಡಿಯಲ್ಲಿ 11 ಲಕ್ಷ ರೂ. ಮಂಜೂರಾಗಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಗೊಳ್ಳಲಿದೆ.
– ಸಿಂಧೂ ಎಲಿಗಾರ, ಸಿಡಿಪಿಒ, ಹೊಸಪೇಟ