Advertisement

ಯೋಜನೆ ದುರುಪಯೋಗ ಬೇಡ

01:47 PM Nov 18, 2019 | Naveen |

ಕಂಪ್ಲಿ: ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ನಬಾರ್ಡ್‌ ಯೋಜನೆಯಡಿಯಲ್ಲಿ ನಿರ್ಮಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ನೂತನ ಕಚೇರಿ ಕಟ್ಟಡವನ್ನು ಸಂಡೂರು ಶಾಸಕ ಹಾಗೂ ಮಾಜಿ ಸಚಿವ ಈ. ತುಕಾರಾಂ ಉದ್ಘಾಟಿಸಿದರು.

Advertisement

ನಂತರ ಅವರು ಮಾತನಾಡಿ, ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರೈತರಪರ ಯೋಜನೆಗಳನ್ನು ಜಾರಿಗೆ ತರುವ ಜತೆಗೆ ಸಾಲಮನ್ನಾ ಮಾಡಲಾಗಿದೆ. ಬರಗಾಲದ ಬವಣೆಯಿಂದ ಸಾಲದ ಸುಳಿಗೆ ಸಿಲುಕಿದ್ದ ರೈತರಿಗೆ ಸಾಲಮನ್ನಾ ಬಹಳಷ್ಟು ಅನುಕೂಲವಾಗಿದೆ. ಸರ್ಕಾರದ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳಬಾರದು. ಸಹಕಾರ ಸಂಘವು ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. ಸಹಕಾರ ಸಂಘಗಳು ರೈತರಿಗೆ ಪ್ರತಿಯೊಂದು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜಾಗೃತಿವಹಿಸಬೇಕು. ದರೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನಗಳನ್ನು ತಂದು, ಅಭಿವೃದ್ಧಿಪಡಿಸುವ ಜತೆಗೆ ಜನತೆಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನದಲ್ಲಿ ದರೋಜಿ ಗ್ರಾಮದಲ್ಲಿ 10 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ನಂತರ ಹೊಸಪೇಟೆ ಬ.ಜಿ.ಸ. ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲವನ್ನು ನೀಡುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ದರೋಜಿ ಸಹಕಾರ ಸಂಘವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಸಹಕಾರ ಸಂಘದ ಅಭಿವೃದ್ಧಿಗೆ ರೈತರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ರೈತರಿಗೆ ಸಹಕಾರ ಸಂಘದಿಂದ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪಿ.ಎಸ್‌.ಲಿಂಗಪ್ಪ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ವಿ. ಜನಾರ್ದನ, ತಾಪಂ ಸದಸ್ಯೆ ತಿರುಕವ್ವಾ ವೆಂಕಟೇಶ್‌, ತಾಪಂ ಮಾಜಿ ಉಪಾಧ್ಯಕ್ಷ ಮಾರೆಪ್ಪ, ಗ್ರಾಪಂ ಅಧ್ಯಕ್ಷೆ ಎನ್‌.ಪಲ್ಲವಿ, ಉಪಾಧ್ಯಕ್ಷ ಎಂ.ಎಸ್‌.ಗುರುಮೂರ್ತಿ, ಹೊಸಪೇಟೆ ಬ.ಜಿ.ಸ. ಕೇಂದ್ರ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಿ. ಕುಬೇರಪ್ಪ, ಸಹಕಾರ ಸಂಘದ ಉಪನಿಬಂಧಕರಾದ ಡಾ| ಸುನೀತಾ ಸಿದ್ರಾಮ್‌, ದಸ್ತಗಿರಿ ಅಲಿ, ಸಹಕಾರ ಅಭಿವೃದ್ಧಿ ಅಧಿಕಾರಿ ಟಿ. ಶರಣಪ್ಪ ಬಸಪ್ಪ, ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಾಹಕರಾದ ರಾಮಾಂಜನೇಯ, ದೇವೇಂದ್ರಪ್ಪ, ಮುಖಂಡರಾದ ನರಸಿಂಹಮೂರ್ತಿ, ಜೆ.ಎಂ. ವೃಷಭೇಂದ್ರಯ್ಯಸ್ವಾಮಿ, ಏಕಾಂಬ್ರಪ್ಪ, ವೆಂಕಟೇಶ್‌ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next