ಕಂಪ್ಲಿ: ಪಟ್ಟಣವನ್ನೊಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಹಿಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆ ಹಾಗೂ ಬಾಳೆತೋಟದಲ್ಲಿ ಗಿಡಗಳು ನೆಲಕ್ಕುರುಳಿವೆ.
ತುಂಗಭದ್ರಾ ನದಿ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ, ವಿಜಯನಗರ ಕಾಲುವೆಗಳ ವ್ಯಾಪ್ತಿಯಲ್ಲಿ ನಾಟಿ ಮಾಡಲಾದ ಹಾಗೂ ನೆಡಲಾದ ಭತ್ತ ಮತ್ತು ಬಾಳೆಗಿಡಗಳು ನೆಲಕ್ಕಚ್ಚಿವೆ. ತಾಲೂಕಿನ ರಾಮಸಾಗರ, ಸಣಾಪುರ, ದೇವಸಮುದ್ರ, ಹಿರೇಜಾಯಿಗನೂರು, ಚಿಕ್ಕ ಜಾಯಿಗನೂರು ರೈತರು ಹಿಂಗಾರು ಅಂದರೆ ಬೇಸಿಗೆ ಹಂಗಾಮಿನಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ.
ಸುಮಾರು 20ರಿಂದ 30 ನಿಮಿಷಗಳ ಕಾಲ ಭಾರಿ ಪ್ರಮಾಣದಲ್ಲಿ ಮಳೆಯಾಗುವುದರ ಜೊತೆಗೆ ಬಿರುಗಾಳಿ ಬೀಸಿದ್ದರಿಂದ ಕಾಳು ಕಟ್ಟಿದ ಭತ್ತದ ಬೆಳೆ ನೆಲಕ್ಕುರುಳಿದೆ. ಹೀಗೆ ಅಕಾಲಿಕ ಮಳೆ ಗಾಳಿಗೆ ನೆಲಕ್ಕುರುಳಿದ ಭತ್ತದ ಬೆಳೆಯನ್ನು ಕೃಷಿ ಕೂಲಿಕಾರ್ಮಿಕರು ಎತ್ತಿ ಕಟ್ಟುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂತು.
ಇನ್ನು ತಾಲೂಕಿನ ರಾಮಸಾಗರ ಮತ್ತು ಕೋಟೆಯ ಮಾಗಾಣಿ ಪ್ರದೇಶದಲ್ಲಿ ಅಕಾಲಿಕ ಮಳೆ ಗಾಳಿಗೆ ಬಾಳೆಗಿಡಗಳು ನೆಲಕ್ಕುರುಳಿವೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡರು. ಜೊತೆಗೆ ಯುಗಾದಿಗೆ ಮುನ್ನ ಇದುವರೆಗೂ ಮಳೆಯಾಗಿರಲಿಲ್ಲ. ಆದರೆ ಈ ವರ್ಷ ಅವಧಿಗೆ ಮುನ್ನ ಮುಂಗಾರು ಪೂರ್ವ ಮಳೆಯಾಗಿದ್ದು, ಇದು ರೈತರಿಗೆ ಅನುಕೂಲವಾಗುವ ಬದಲಿಗೆ ನಷ್ಟವನ್ನು ಉಂಟುಮಾಡಿದೆ ಎಂದರು.
ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ರೈತ ಮುಖಂಡರಾದ ಬಿ. ನಾರಾಯಣಪ್ಪ, ಕಟ್ಟೆ ಅಯ್ಯಪ್ಪ, ಕಾಮಗಂಡಿ ವಿರೂಪಾಕ್ಷಪ್ಪ, ಎಚ್. ರಾಜಶೇಖರಗೌಡ ಮನವಿ ಮಾಡಿದರು.