ಕಂಪ್ಲಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿರುವ ಮೆಣಸಿಕಾಯಿ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿರುವುದು ಒಂದೆಡೆಯಾದರೆ, ಇಳುವರಿಯೂ ಕಡಿಮೆಯಾಗಿದ್ದು, ಗ್ರಾಹಕರಿಗೆ ಮಾತ್ರ ಬೆಲೆ ಏರಿಕೆ ಬಿಸಿ ಎದುರಾಗಿದೆ.
ತಾಲ್ಲೂಕಿನ ಕಣವಿ ತಿಮ್ಮಲಾಪುರ, ದೇವಸಮುದ್ರ, ಶ್ರೀ ರಾಮರಂಗಾಪುರ, ಸುಗ್ಗೇನಹಳ್ಳಿ, ಉಪ್ಪಾರಹಳ್ಳಿ, ಮೆಟ್ರಿ ಗ್ರಾಮಗಳ ವ್ಯಾಪ್ತಿಯೂ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 6250ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಡಬ್ಬಿ, ಬ್ಯಾಡಗಿ 5531,
355, 4384 ತಳಿಯ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದೆ. ಈ ಭಾರಿ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಳೆಗೆ ಮಚ್ಚೆರೋಗ, ಫಂಗಸ್ ಕಾಣಿಸಿಕೊಂಡು ಇಳುವರಿ ಕುಸಿದಿದೆ.
ಮೆಣಸಿನಕಾಯಿ ಬೆಳೆ ಬೆಳೆಯಲು ಒಂದು ಎಕರೆಗೆ 1 ಲಕ್ಷದಿಂದ 1.2 ಲಕ್ಷದವರೆಗೆ ವ್ಯಯಿಸಲಾಗಿದ್ದು, ರೈತರು ಎಕರೆಗೆ 18ರಿಂದ 22 ಕ್ವಿಂಟಲ್ ಇಳುವರಿ ನಿರೀಕ್ಷೆ ಮಾಡಿದ್ದರು. ಆದರೆ ರೋಗಬಾಧೆಯಿಂದ ಎಕರೆಗೆ 10ರಿಂದ 13 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ.
ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 23 ಸಾವಿರ ರೂ. ಇದ್ದ ಬೆಲೆ ಇದೀಗ ಏಕಾಏಕಿ 13 ಸಾವಿರಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರೈತರು ಮೆಣಸಿನಕಾಯಿ ಮಾರುಕಟ್ಟೆಗೆ ಸಾಗಿಸಲು ಹಾಗೂ ಜಮೀನಿನಲ್ಲಿರುವ ಮೆಣಸಿನಕಾಯಿಯನ್ನು ಕಟಾವು ಮಾಡಲು ಹಿಂಜರಿಯುವಂತಾಗಿದೆ. ದೇವಸಮುದ್ರ ಗ್ರಾಮದಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ರೈತರಾದ ಕುರುಗೋಡು ಗಾಳೆಪ್ಪ ಮೂರುವರೆ ಎಕರೆ, ನಾಯಕರ ವೆಂಕೋಬ 2-3 ಎಕರೆ, ಹೊನ್ನೂರ 2 ಎಕರೆ, ವಿರುಪಣ್ಣ 3, ನಾಯಕರ ಪಂಪಣ್ಣ ಅವರ 2 ಎಕರೆ ಹೊಲದಲ್ಲಿ ಹಾಗೂ ಶ್ರೀರಾಮರಂಗಾಪುರ ವ್ಯಾಪ್ತಿಯಲ್ಲಿ ರೈತರೊಬ್ಬರು 35 ಎಕರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಪಡೆದು ಮೆಣಸಿನಕಾಯಿ ಬೆಳೆದಿದ್ದಾರೆ. ಬೆಳೆ ನಿರ್ವಹಣೆ ಹಾಗೂ ಗುತ್ತಿಗೆ 24 ಲಕ್ಷ ರೂ. ಸೇರಿದಂತೆ 35 ಲಕ್ಷ ರೂ. ಖರ್ಚು ಮಾಡಿದ್ದು, ಬೆಲೆ ಕುಸಿತದಿಂದ ಏನು ಮಾಡಬೇಕೆಂದು ತೋಚುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಭಾಗದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಭತ್ತ ಖರೀದಿ ಕೇಂದ್ರ ಆರಂಭಿಸಿದಂತೆ ಮೆಣಸಿನಕಾಯಿಗೂ ವೈಜ್ಞಾನಿಕ ದರ ನಿಗಧಿ ಪಡಿಸಿ ಖರೀದಿ ಕೇಂದ್ರ ಆರಂಭಿಸಿದಲ್ಲಿ 250 ಕಿಮೀ ದೂರದ ಬ್ಯಾಡಗಿ ಮಾರುಕಟ್ಟೆಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತರಾದ ಕುರುಗೋಡು ಗಾಳೆಪ್ಪ, ನಾಯಕರ ವೆಂಕೋಬ, ಹೊನ್ನೂರ, ನಾಯಕರ ಪಂಪಣ್ಣ, ವಿರುಪಣ್ಣ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ಸುಮಾರು 6250 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ತಡವಾಗಿ ನಾಟಿ ಮಾಡಿದ್ದರಿಂದ ಹಾಗೂ ಅಕಾಲಿಕ ಮಳೆಯಾಗಿದ್ದರಿಂದ ಇಳುವರಿ ಕಡಿಮೆಯಾಗಿದೆ. ಜೊತೆಗೆ ಏಕಕಾಲದಲ್ಲಿ ಮಾರುಕಟ್ಟೆಗೆ ಮೆಣಸಿನಕಾಯಿ ಮಾರಾಟಕ್ಕೆ ಬರುವುದರಿಂದ ಬೆಲೆಯಲ್ಲಿ ಕುಸಿತವಾಗಿದೆ. ಜೊತೆಗೆ ನೆಲದ ಮೇಲೆ ಹಾಕಿ ಒಣಗಿಸುತ್ತಿದ್ದು ಇದರಿಂದ ಅಪ್ಲೋಟಾಕಿನ್ ಫಂಗಸ್ ತಗುಲುವ ಸಾಧ್ಯತೆ ಇರುವುದರಿಂದ ರೈತರು ತಾಡಪಾಲಿನ ಮೇಲೆ ಒಣಗಿಸಬೇಕು.
ಎಚ್. ರಾಜೇಂದ್ರ, ತೋಟಗಾರಿಕಾ
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ
ಕಂಪ್ಲಿ ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುವ ತನಕ ಫಸಲನ್ನು ರಕ್ಷಿಸಿಕೊಳ್ಳಲು ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು.
ಅಳ್ಳಳ್ಳಿ ವಿರೇಶ,
ಎಪಿಎಂಸಿ ಮಾಜಿ ಅಧ್ಯಕ್ಷ ದೇವಸಮುದ್ರ
ಜಿ.ಚಂದ್ರಶೇಖರಗೌಡ