ಕಂಪ್ಲಿ: ಪಟ್ಟಣದ 22ನೇ ವಾರ್ಡ್ ಎಂಡಿಕ್ಯಾಂಪಿನ 1ನೇ ಅಂಗವಾಡಿ ಕೇಂದ್ರಕ್ಕೆ ಹೊಸಪೇಟೆ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರದ ದಾಖಲೆಗಳನ್ನು ಪರಿಶೀಲಿಸಿದ ನಂತರ ಯೋಜನಾಧಿಕಾರಿ ಅಮರೇಶ್ ಮಾತನಾಡಿ, ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ರಜೆ ನೀಡಲಾಗಿದೆ. ಕೋವಿಡ್ ಹಿನ್ನೆಲೆ ಮಕ್ಕಳ ಹಾಗೂ ಗರ್ಭಿಣಿ ಮತ್ತು ಬಾಣಂತಿಯರ ಮನೆ ಮನೆಗೆ ನಿಗಪಡಿಸಿದ ಆಹಾರಧಾನ್ಯ ಹಾಗೂ ಮೊಟ್ಟೆಗಳನ್ನು ಅಂಗನವಾಡಿ ಶಿಕ್ಷಕರು ತಲುಪಿಸುತ್ತಿದ್ದಾರೆ. ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ನೀಡುವ ಆಹಾರಧಾನ್ಯ ಹಾಗೂ ಮೊಟ್ಟೆಗಳನ್ನು ದಾಖಲಾತಿ ಪುಸ್ತಕಗಳಲ್ಲಿ ತಪ್ಪದೇ ನಮೂದಿಸಬೇಕು ಎಂದರು.
ಪ್ರಧಾನಮಂತ್ರಿ ಮಾತೃವಂದನ ಹಾಗೂ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಹಾಯಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿಯಲ್ಲಿ ಮೊದಲನೇ ಬಾರಿ ಗರ್ಭಿಣಿಯಾದವರಿಗೆ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಅರ್ಹಫಲಾನುಭವಿಗಳಿಗೆ ಎರಡು ಹೆರಿಗೆಗೆ 6 ಸಾವಿರ ರೂ. ಸಹಾಯಧನ ನೀಡಲಾಗುವುದು. ಅರ್ಹ ಫಲಾನುಭವಿಗಳು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅಂಗನವಾಡಿ ಶಿಕ್ಷಕಿಯರಿಂದ ಪರಿಪೂರ್ಣ ಮಾಹಿತಿ ಪಡೆದು, ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ನೀಡಲಿದ್ದು, ಅರ್ಜಿಗಳನ್ನು ಪರಿಪೂರ್ಣವಾಗಿ ದಾಖಲೆಗಳ ಪ್ರಕಾರ ತುಂಬಿ, ತಾಯಿ ಕಾರ್ಡ್, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಪ್ರತಿ ಸೇರಿದಂತೆ ಬೇಕಾಗುವ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಅಂಗನವಾಡಿ ಶಿಕ್ಷಕಿಯರಿಗೆ ನೀಡಬೇಕು. ಈ ಯೋಜನೆಗಳ ಸಹಾಯಧನವನ್ನು ಗರ್ಭಿಣಿಯರು ಹಾಗೂ ಬಾಣಂತಿಯರು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರ ಸುರಕ್ಷತೆಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಳನ್ನು ವಿತರಿಸಲಾಯಿತು. ನಂತರ ಅಂಗನವಾಡಿ
ಶಾಲಾ ಮಕ್ಕಳ ಮನೆ ಮನೆಗೆ ತೆರಳಿ ನಿಗ ಪಡಿಸಿದ ಆಹಾರಧಾನ್ಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಲತೀಫಾಬೇಗಂ, ರೇಣುಕಾ, ಶಿಕ್ಷಕಿ ರಾಧಾ, ಹೆಲ್ಪರ್ ಜಿ.ಮಲ್ಲಮ್ಮ ಇದ್ದರು.