ಕಂಪ್ಲಿ: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಎಮ್ಮಿಗನೂರು ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠ(ದೇವಸ್ಥಾನ)ಕ್ಕೆ ಆಡಳಿತಾಧಿ ಕಾರಿಯನ್ನು ಕೂಡಲೇ ನೇಮಕ ಮಾಡಬೇಕೆಂಬ ಒತ್ತಾಯಗಳು ತಾಲೂಕಿನ ಎಮ್ಮಿಗನೂರು ಗ್ರಾಮದ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾದವು.
ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಶ್ರೀ ಜಡಿಸಿದ್ದೇಶ್ವರಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂಬುದು ಸರ್ವ ಸದಸ್ಯರ ಒತ್ತಾಯದ ಜತೆಗೆ ಒಪ್ಪಿಗೆಯೊಂದಿಗೆ ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.
ಸರ್ಕಾರದ ಆದೇಶದಂತೆ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಹಾಗೂ ಧರ್ಮಾದಾಯ ದತ್ತಿಗಳ ಅಧಿ ನಿಯಮದಂತೆ ಅಧಿಸೂಚಿತ ಸಂಸ್ಥೆಯಾಗಿದೆ. ಎಮ್ಮಿಗನೂರು ಶ್ರೀ ಜಡಿಸಿದ್ದೇಶ್ವರ ದೇವಸ್ಥಾನವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ 2004ರ ಫೆ. 25ರಂದು ಒಳಪಟ್ಟಿದೆ. ಶ್ರೀ ಜಡಿಸಿದ್ದೇಶ್ವರ ಮಠವು ಸೇರಿದರೂ ಸಹ ಆಡಳಿತಾಧಿಕಾರಿಯನ್ನು ನೇಮಕ ಮಾಡುವಲ್ಲಿ ಇಲಾಖೆ ನಿರ್ಲಕ್ಷ್ಯವಹಿಸುವ ಜತೆಗೆ ಕೋರ್ಟ್ ಹಾಗೂ ಸರ್ಕಾರದ ಆದೇಶವನ್ನು ದೂರ ತಳ್ಳಿದೆ. ಇದರಿಂದ ಮಠದ ಸರ್ವಾಂಗೀಣ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ತಕ್ಷಣ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ನಿಗಾವಹಿಸಿ, ಇಲಾಖೆಗೆ ಒಳಪಟ್ಟ ಶ್ರೀಜಡಿಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿ ಕಾರಿಯನ್ನು ನೇಮಕ ಮಾಡಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿದರು.
ಈ ಸಭೆಯಲ್ಲಿ ಸಾರ್ವಜನಿಕರು ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗೆ ಮನವಿ ಪತ್ರದೊಂದಿಗೆ ಒತ್ತಾಯಿಸಿದ ಹಿನ್ನೆಲೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಚರ್ಚಿಸಿ, ಅನುಮೋದಿಸಿದರು. ಸದಸ್ಯ ಎಚ್. ರಾಮಾಂಜಿನೇಯ್ಯ ಮಾತನಾಡಿ, ಎಮ್ಮಿಗನೂರು ಗ್ರಾಮದ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟು 16 ವರ್ಷಗಳು ಕಳೆದರೂ, ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಇಲಾಖೆಗೆ ಆಗುತ್ತಿಲ್ಲ. ಇದರಿಂದ ಮಠವು ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಿ, ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಮೂಲಕ ಮಠದ ಅಭಿವೃದ್ಧಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ನಂತರ ಗ್ರಾಪಂ ಅಧ್ಯಕ್ಷೆ ಆರ್. ಪ್ರತಿಮಾ ಅವರು ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂಬುದು ಸಾರ್ವಜನಿಕರು ಮನವಿ ಪತ್ರ ನೀಡಿದ್ದಾರೆ. ಮಠದ ಅಭಿವೃದ್ಧಿ ದೃಷ್ಟಿಯಿಂದ ಮಠಕ್ಕೆ ಆಡಳಿತಾಧಿ ಕಾರಿಯನ್ನು ನೇಮಕ ಮಾಡಬೇಕು ಎಂದರು.
ಈ ಸಭೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರು, ಚರಂಡಿ ಸ್ವತ್ಛತೆ ಸೇರಿದಂತೆ ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಗ್ರಾಪಂ ಸದಸ್ಯರಾದ ಎಚ್.ಜಡೆಪ್ಪ, ವಿ. ಮೌನೇಶ್, ವೆಂಕಟೇಶ್, ಬಸಮ್ಮ, ಚೌಡಮ್ಮ, ಹುಲಿಗೆಮ್ಮ, ಶಾರದಮ್ಮ, ರಜಿಯಾ, ಹೊನ್ನೂರಸಾಬ್, ಸಾಯಿಬಣ್ಣ, ಸಾಯಿಬೇಸಿ, ಜೈನಮ್ಮ, ಕೆ.ಜಡೆಪ್ಪ, ಮೌಲಾಬೀ, ಲಕ್ಷ್ಮೀ , ಜಡೆಪ್ಪ, ಬಸವರಾಜ, ಮಡಿವಾಳ ಜಡೆಪ್ಪ, ಕಿಶೋರಕುಮಾರ್, ಗಾದಿಲಿಂಗಪ್ಪ, ಪಿಡಿಒ ತಾರಾನಾಯ್ಕ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.