ಕಂಪ್ಲಿ: ಎಲ್ಲೋ ಮಳೆ, ಎಲ್ಲೋ ಪ್ರವಾಹ ಎಂಬಂತೆ ತುಂಗಾಭದ್ರಾ ಜಲಾಯಶವು ಮೇಲ್ಭಾಗದ ಮಳೆಯಿಂದ ಹರಿದು ಬಂದ ನೀರಿನಿಂದ ತುಂಬಿಕೊಂಡಿದೆ. ಆದರೆ, ನದಿ ಪಾತ್ರದಲ್ಲಿ ಮಳೆ ಇಲ್ಲದಿದ್ದರೂ ಪ್ರವಾಹದ ಸ್ಥಿತಿ ಎದುರಿಸುವಂತಾಗಿದೆ.
ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಪ್ರವಾಹ ಉಂಟಾಗಿ, ಕಂಪ್ಲಿ-ಕೋಟೆಯ ಕೆಲ ಮನೆಗಳಿಗೆ ನೀರು ನುಗ್ಗುವಂತಾಗಿದೆ. ಇಲ್ಲಿನ ಮೀನುಗಾರರ ಕುಟುಂಬಗಳ ರಕ್ಷಣೆಗಾಗಿ ಕಾಳಜಿ ಕೇಂದ್ರ ತೆರೆಯುವ ಜತೆಗೆ ನಿರಾಶ್ರಿತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಈಗಾಗಲೇ ಸೇತುವೆ ಮುಳುಗಡೆ ಪರಿಣಾಮ ಎರಡು ಜಿಲ್ಲೆಯ ಜನರ ಸಂಪರ್ಕ ಕಡಿತಗೊಂಡಿದೆ. ವಾಣಿಜ್ಯ ಕೇಂದ್ರ ಹಾಗೂ ರೈತರು ಜಮೀನುಗಳಿರುವುದರಿಂದ ಕಂಪ್ಲಿ-ಗಂಗಾವತಿಗೆ ಸಂಪರ್ಕಿಸಬೇಕಾದರೆ, ಜನರು ಬುಕ್ಕಸಾಗರ ಸೇತುವೆ ಮೂಲಕ ಸುಮಾರು 30 ಕಿ.ಮೀ ಕ್ರಮಿಸಬೇಕಾದ ದುಸ್ಥಿತಿ ಎದುರಾಗಿದೆ. ಕಂಪ್ಲಿ-ಕೋಟೆಯ ಪಂಪಾಪತಿ ದೇವಸ್ಥಾನ ಬಳಿಯ ಮಾಗಾಣಿ ರಸ್ತೆಯು ಸಂಪೂರ್ಣವಾಗಿ ಮುಳುಗಿ, ಭತ್ತ, ಕಬ್ಬು ಜಲದಿಗ್ಭಂಧನವಾಗಿದೆ. ಇಲ್ಲಿನ ಹೊಳೆ ಆಂಜನೇಯ ದೇವಸ್ಥಾನವು ನದಿ ಹಿನ್ನೀರಿನಿಂದ ಜಲಾವೃತವಾಗಿದೆ. ಇಲ್ಲಿನ ಕೋಟೆಯ ಜನರು ತೆಪ್ಪದ ಮೂಲಕ ಸಂಪರ್ಕಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಆತಂಕದಲ್ಲಿ ರೈತರು : ನದಿ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿದ್ದು, ಅನ್ನದಾತರು ಸಂಕಷ್ಟಕ್ಕೀಡಾಗುವಂತಾಗಿದೆ. ಕಂಪ್ಲಿ-ಕೋಟೆ ಪ್ರದೇಶ, ಇಟಗಿ, ಸಣಾಪುರದ ನದಿ ಪಾತ್ರದಲ್ಲಿ ರೈತರ ಬೆಳೆಗಳು ನೀರು ಪಾಲಾಗಿವೆ. ನದಿ ಪ್ರವಾಹ ಇಳಿದ ತಕ್ಷಣ ಅಧಿಕಾರಿಗಳ ಸರ್ವೆ ನಡೆಸಿ, ಬೆಳೆ ನಷ್ಟ ಪರಿಹಾರ ಒದಗಿಸಿದರೆ, ರೈತರ ಉಳಿಸಬಹುದು ಎನ್ನಲಾಗುತ್ತಿದೆ.
ಕಾಳಜಿ ಕೇಂದ್ರ: ಇಲ್ಲಿನ ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ೫೭ ಕುಟುಂಬಗಳ ಪಟ್ಟಿ ಮಾಡಿದ್ದು, ಹೆಚ್ಚಿನ ಪ್ರವಾಹ ಉಂಟಾದರೆ, ಉಪಹಾರ, ಊಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಂಪ್ಲಿ-ಕೋಟೆಯ ಹೊಳೆ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿ, ಜಲಾವೃತವಾಗಿದೆ. ಇಲ್ಲಿನ ಸಣಾಪುರ ಗ್ರಾಪಂಯ ಇಟಗಿ ಸಂಪರ್ಕದ ರಸ್ತೆಯು ನದಿ ಹಿನ್ನೀರಿನಿಂದ ಜಲಾವೃತವಾಗಿದ್ದು, ಜನರಿಗೆ ತೊಂದರೆ ಉಂಟಾಗಿದೆ. ಇಲ್ಲಿನ ಗ್ರಾಮಗಳು ಜನರು ಬೇರೆ ಮಾರ್ಗದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮೋಟರ್ ರಕ್ಷಿಸಿಕೊಂಡ ರೈತರು : ನದಿ ಪಾತ್ರದಲ್ಲಿರುವ ರೈತರು ನೀರಿನಲ್ಲಿ ಮುಳುಗಡೆಯ ಭೀತಿಯಲ್ಲಿರುವ ಮೋಟರ್‌ಗಳನ್ನು ರಕ್ಷಿಸಿಕೊಂಡಿದ್ದಾರೆ. ಕೆಲವೊಂದು ಮೋಟರ್‌ಗಳು ನೀರಿನಲ್ಲಿ ಮುಳುಗಿವೆ. ಇಲ್ಲಿನ ನೆರೆ ಹಾವಳಿ ಮುಂದುವರಿದಿದ್ದು, ಸೇತುವೆ ಮೇಲೆ ನಾಲ್ಕು ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡು, ಅಸ್ತವ್ಯಸ್ತವಾಗಿದೆ.