Advertisement

ಮನೆ ಮನೆಗೆ ಬರಲು ಬಹುರೂಪಿ ಗಣೇಶ ಸಿದ್ಧ

11:38 AM Sep 01, 2019 | Naveen |

ಜಿ. ಚಂದ್ರಶೇಖರಗೌಡ
ಕಂಪ್ಲಿ:
ಪೌರಾಣಿಕ, ಧಾರ್ಮಿಕ, ಆಧ್ಯಾತ್ಮಿಕ, ಐತಿಹಾಸಿಕ, ಸಾಮಾಜಿಕ ಅದರಲ್ಲೂ ಇಂದಿನ ವೃತ್ತಿಪರತೆಯನ್ನು ಪ್ರತಿನಿಧಿಸುವ ಛದ್ಮ ವೇಷಧಾರಿ ಬೃಹತ್‌ ಗಣಪತಿಗಳು ಚತುರ್ಥಿಯಂದು ಪ್ರತಿಷ್ಠಾಪನೆಗಾಗಿ ಕಾದು ಕುಳಿತಿವೆ.

Advertisement

ನೋಡುಗರು ತನ್ಮಯತೆಗೊಳ್ಳುವಂತೆ ಆಕರ್ಷಿಸುವ ನಾನಾ ಭಂಗಿಯ ವೈವಿಧ್ಯಮಯ ರೂಪದ ಗಣಪತಿ ಮೂರ್ತಿಗಳು ಪಟ್ಟಣದಲ್ಲಿ ರೂಪುಗೊಂಡಿವೆ. ಗಣಪತಿ ಮೂರ್ತಿಗಳು ಮಾರಾಟವಾಗುವ ಮುನ್ನ, ಸದ್ಭಕ್ತರು ಪ್ರತಿಷ್ಠಾಪನೆಗಾಗಿ ಒಯ್ಯುವ ಮುನ್ನ ಕಲಾವಿದನ ಕುಂಚದಲಿ ಅಂತಿಮ ರೂಪ ಪಡೆಯುತ್ತಿವೆ.

ಪಟ್ಟಣದ ಚಿತ್ರಗಾರ ಕುಟುಂಬದ ಸದಸ್ಯರು ಹಾಗೂ ಹವ್ಯಾಸಿ ಕಲಾವಿದರು ವೈವಿಧ್ಯಮಯ ಗಣೇಶ ಮೂರ್ತಿಗಳನ್ನು ಸೃಷ್ಟಿಸುತ್ತಿದ್ದಾರೆ. ಇನ್ನೇನು ಸೋಮವಾರ ಭಾದ್ರಪದ ಚವತಿಯಂದು ಗಣಪತಿ ಪ್ರತಿಷ್ಠಾಪನೆಗೊಳ್ಳಲಿದ್ದಾನೆ.

ಬೇರೆ ಬೇರೆ ಕಲಾವಿದರು, ಪಟ್ಟಣದ ಚಿತ್ರಗಾರ ಕುಟುಂಬದವರು ತುಮಕೂರು ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ, ಹೊಯ್ಸಳ ರಾಜಮುದ್ರಿಕೆ, ತಿರುಪತಿ ವೆಂಕಟರಮಣ, ಮಾರ್ಬಲ್ ಗಣೇಶ, ಕನಕದಾಸ ರೂಪ, ಉಗ್ರ ನರಸಿಂಹ, ಬ್ರಹ್ಮನ ರೂಪ, ಡೈನೋಸಾರ್‌, ಶಾಂತಸ್ವಾಭಾವದ ಬುದ್ಧ ಸೇರಿದಂತೆ ವಿವಿಧ ಗಣೇಶ ಮೂರ್ತಿಗಳು ಸೆ. 2ರಂದು ಪ್ರತಿಷ್ಠಾಪನೆಗಾಗಿ ಕಾದು ಕುಳಿತಿವೆ.

ಗಂಗಾ ನದಿ ಮಣ್ಣಿನೊಂದಿಗೆ ಸ್ಥಳೀಯವಾಗಿ ದೊರಕುವ ಮಣ್ಣು, ಬೊಂಬು, ಬಿದಿರು, ಹುಲ್ಲು, ತಟ್ಟುಗಳನ್ನು, ಉರುಕೋನಿ, ಕಟ್ಟಿಗೆ, ಹತ್ತಿ ಬಟ್ಟೆ ಇತ್ಯಾದಿ ಉಪಯೋಗಿಸಿ ಸೃಷ್ಟಿಸಿರುವ 60ಕ್ಕೂ ಹೆಚ್ಚು ಗಣಪತಿ ಪ್ರತಿಮೆಗಳೆಲ್ಲವೂ ಪರಿಸರ ಪ್ರೇಮಿಯಾಗಿವೆ. ಫ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಸೇರಿ ಜಲ ಮಾಲಿನ್ಯವನ್ನುಂಟು ಮಾಡುವ ಯಾವುದೇ ಬಣ್ಣ, ರಾಸಾಯನಿಕ ವಸ್ತುಗಳನ್ನು ಬಳಸದೆ ನೀರಿನಲ್ಲಿ ಸುಲಭವಾಗಿ ಕರಗುವ ಪರಿಸರ ಸ್ನೇಹಿ ಮಣ್ಣು, ವಾಟರ್‌ ಪೇಂಟ್ ಬಳಸಿ ತಯಾರಿಸಲಾಗಿದೆ. 4000 ರೂಪಾಯಿಗಳಿಂದ 17000 ರೂಪಾಯಿಗಳ ತನಕ ಗಣಪತಿ ಮಾರಾಟವಾಗುತ್ತವೆ.

Advertisement

ಸ್ಥಳೀಯ ಕಲಾವಿದರಾದ ಭೂಸಾರೆ ಕೃಷ್ಣ ಮತ್ತು ಚಿತ್ರಗಾರ ರಾಮು ಅವರು ಮಣ್ಣಿನ ಗಣೇಶ ಮೂರ್ತಿಗಳೇ ಪೂಜೆಗೆ ಶ್ರೇಷ್ಠ ಎನ್ನುವ ಅವರು ಈ ವರ್ಷ ವಿಶೇಷವಾಗಿ ಪ್ರತಿಯೊಬ್ಬರಿಗೆ ಕೈಗೆಟುಕುವ ಬೆಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟದಲ್ಲಿ ನಿರತರಾಗಿದ್ದಾರೆ. ಇನ್ನು ಸ್ಥಳೀಯ ಕಲಾವಿದರಾದ ಚಿತ್ರಗಾರ ಕುಟುಂಬದವರು, ಭೂಸಾರೆ ಸಹೋದರರು ವೈವಿಧ್ಯಮಯ ಗಣಪತಿಗಳನ್ನು ತಯಾರಿಸಿದ್ದು, ಭರದಿಂದ ಮಾರಾಟ ಮಾಡುತ್ತಿದ್ದಾರೆ. ಪಟ್ಟಣದ ಪ್ರಮುಖ ಬೀದಿಯಲ್ಲಿ ಅಲ್ಲಲ್ಲಿ ಗಣಪತಿಗಳನ್ನು ಮಾರುತ್ತಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next