ಕಂಪ್ಲಿ: ದೇಶಕ್ಕೆ ಒಂದೇ ಸಂವಿಧಾನ, ರಾಷ್ಟ್ರ ಧ್ವಜ ಹಾಗೂ ಒಬ್ಬರೇ ಪ್ರಧಾನಮಂತ್ರಿ ಎನ್ನುವುದನ್ನು ಇಡೀ ದೇಶವೇ ಒಪ್ಪತ್ತದೆ. ಇದರ ಬಗ್ಗೆ ಎಲ್ಲೆಡೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯಾದ್ಯಂತ ಜಾಗೃತಿ ಆಂದೋಲನವನ್ನು ಭಾಜಪ ಒಬಿಸಿ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಭಾಜಪ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೈ. ಯಮುನೇಶ್ ತಿಳಿಸಿದರು.
ಅವರು ಭಾನುವಾರ ಪಟ್ಟಣದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ರದ್ದುಪಡಿಸಿರುವ ಸಂವಿಧಾನದ 370ನೇ 35ಎ ವಿಧಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶಾದ್ಯಂತ ಸೆ. 1ರಿಂದ ಸೆ. 30ರವರೆಗೆ 370ನೇ ಹಾಗೂ 35 ಎ ಸಂವಿಧಾನ ವಿಧಿಯ ರದ್ದತಿ ಕುರಿತು ಮತ್ತು ಅದರಿಂದಾಗುವ ಅನುಕೂಲಗಳನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
1949ರಲ್ಲಿ ಜಮ್ಮು ಕಾಶ್ಮೀರದ ರಾಜ ಹರಿಸಿಂಗ್ ಮತ್ತು ಶೇಖ್‌ಅಬ್ದುಲ್ಲ ಅವರಿಂದಾಗಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಇದರಿಂದ ಯಾವುದೇ ಲಾಭ ಆ ರಾಜ್ಯಕ್ಕೆ ದೊರಕದೇ ಕೇವಲ ಕೆಲವೇ ಕುಟುಂಬಗಳಿಗೆ ಅನುಕೂಲವಾಗಿತ್ತು. ವಿಶೇಷ ಸ್ಥಾನಮಾನದಿಂದ ಇಡೀ ರಾಜ್ಯವೇ ಹಿಂದುಳಿದಿತ್ತು. ಇದೀಗ ಭಾಜಪ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್‌ಷಾ ಅವರ ದಿಟ್ಟ ನಿರ್ಧಾರದಿಂದಾಗಿ ಜಮ್ಮು ಕಾಶ್ಮಿರಕ್ಕೆ ಇದ್ದ ಆರ್ಟಿಕಲ್ 370 ಹಾಗೂ 35 ಎ ಅನ್ನು ತೆಗೆದು ಹಾಕಲಾಗಿದ್ದು, ದೇಶದ ಎಲ್ಲ ರಾಜ್ಯಗಳಿಗೂ ಇದ್ದಂತೆಯೇ ಅಲ್ಲಿಯೂ ಸಮಸ್ತರಿಗೆ ಸಮಾನ ಅವಕಾಶಗಳು ಸಿಗುವಂತಾಗಿದೆ. ಜೊತೆಗೆ ಮೀಸಲಾತಿಯೇ ಇಲ್ಲದ, ಪಜಾ, ಪಪಂ ಮತ್ತು ಒಬಿಸಿ ವರ್ಗಗಳಿಗೆ ಮೀಸಲಾತಿ ದೊರಕಲಿದೆ. ಕಣಿವೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಜೊತೆಗೆ ಕೈಗಾರಿಕೆಗಳು ತಲೆ ಎತ್ತಲಿವೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶಾದ್ಯಂತ ಸಂವಿಧಾನದ 370 ಹಾಗೂ 35ಎ ಅನ್ನು ರದ್ದುಪಡಿಸಿರುವ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಆಂದೋಲನಗಳನ್ನು ಏರ್ಪಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಒಬಿಸಿ ಕೊಪ್ಪಳ ಜಿಲ್ಲಾಧ್ಯಕ್ಷ ಬಾರಕೇರ ವಿರೂಪಾಕ್ಷ, ಪುರಸಭೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ, ಜಿ.ಸುಧಾಕರ್, ಕೊಡದಲ್ ರಾಜು, ಪುರಸಭೆ ಸದಸ್ಯರಾದ ಸಣ್ಣ ಹುಲುಗಪ್ಪ, ಸಪ್ಪರದ ರಾಘವೇಂದ್ರ, ರಘುನಾಯಕ್, ಸಜ್ಜದ ಸಿದ್ದಲಿಂಗಪ್ಪ, ಜಿ. ರಾಮಣ್ಣ, ಬಿ. ನಾಗೇಂದ್ರ, ಬಿ.ದೇವೇಂದ್ರ, ಶಿವಪ್ಪನಾಯ್ಕ, ಬಿ.ಕೆ. ವಿರೂಪಾಕ್ಷಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.