ಬ್ಯಾಡಗಿ: 15 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ತಾಲೂಕಿನ ಕುಮ್ಮೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 3 ಕೊಠಡಿಗಳು ನೆಲ ಸಮವಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.
ಮಳೆ ರೌದ್ರಾವತಾರ ಮುಂದುವರೆಸಿದ್ದು ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಿದ್ದರಿಂದ ಮಕ್ಕಳು ಮತ್ತು ಶಿಕ್ಷಕರು ಅನಾಹುತದಿಂದ ಪಾರಾಗಿದ್ದಾರೆ. ತಾಲೂಕಿನ ಮಲೆನಾಡು ಭಾಗದ ಕುಮ್ಮೂರಿನಲ್ಲಿ ಪ್ರತಿ ಸಲವೂ ಮಳೆ ಪ್ರಮಾಣ ಹೆಚ್ಚಾಗಿರಲಿದೆ, ಆದರೆ, ರಾತ್ರಿ ಸುರಿದ ಭಾರಿ ಮಳೆಗೆ ಶಾಲೆಯ ಮೂರು ಕೊಠಡಿಗಳ ಮೇಲ್ಛಾವಣಿ ನೆಲಕಚ್ಚಿವೆ.
ಜಿಲ್ಲಾಧಿಕಾರಿಗಳು ಒಂದು ವೇಳೆ ಜು.13 ರಿಂದ ರಜೆ ಹಿಂಪಡೆದರೂ ಕುಮ್ಮೂರಿನಲ್ಲಿ ಕೊಠಡಿಗಳ ಕೊರತೆಯಿಂದ ಶಾಲೆ ನಡೆಯುವದು ಅಸಾಧ್ಯ. ಒಟ್ಟು 6 ರಲ್ಲಿ 3 ಕೊಠಡಿಗಳು ನೆಲಸಮವಾಗಿದ್ದು, ಇನ್ನುಳಿದ 3 ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ ಮಂಗಳವಾರದಿಂದಲೂ ಮಕ್ಕಳಿಗೆ ಪಾಠ ಪ್ರವಚನ ನಡೆಯುವುದು ಕಷ್ಟ ಸಾಧ್ಯ.
ಸ್ಥಳೀಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ತಾಪಂ ಸದಸ್ಯ ಮಹೇಶಗೌಡ ಪಾಟೀಲ, ಬಿಇಒ ರುದ್ರಮುನಿ, ಸಮನ್ವಯಾಧಿಕಾರಿ ಎಂ.ಎಫ್.ಬಾರ್ಕಿ, ಸಿಆರ್‌ಪಿ ಗುರುರಾಜ ಚಂದ್ರಗೇರಿ, ಮುಖ್ಯ ಶಿಕ್ಷಕಿ ರೇಣುಕಾ ಪೂಜಾರ ಕಾಗಿನೆಲೆ ಪಿಎಸ್‌ಐ ಹನುಮಂತಪ್ಪ ಹಾಗೂ ಎಸ್‌ಡಿಎಂಸಿ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು ಶಾಲೆಗೆ 10 ನೂತನ ಕೊಠಡಿಗಳಿಗಾಗಿ ಶಾಸಕರು ಮತ್ತು ಅಧಿಕಾರಿಗಳ ಬಳಿ ಬೇಡಿಕೆಯನ್ನಿಟ್ಟರು.