ಲಕ್ನೋ: ಉತ್ತರ ಪ್ರದೇಶದ ಹಿಂದೂ ಸಮಾಜ ಪಾರ್ಟಿಯ ಮುಖಂಡ ಕಮಲೇಶ್ ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ಹಿಂದೂ ಮುಖಂಡ ಕಮಲೇಶ್ ತಿವಾರಿ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿತ್ತು. ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮೌಲ್ವಿ ಸೇರಿದಂತೆ ಇಬ್ಬರು ಶೂಟರ್ ಗಳನ್ನು ಬಂಧಿಸಲಾಗಿತ್ತು.
ಪೊಲೀಸರು ಬಂಧಿತರನ್ನು ವಿಚಾರಣೆ ನಡೆಸಿದ್ದು, ಕೆಲವು ಮಾಹಿತಿಗಳನ್ನು ಹೊರಹಾಕಿದ್ದಾರೆ.
ಆರೋಪಿಗಳು ಕಮಲೇಶ್ ತಿವಾರಿಯನ್ನು ಕೊಲೆಗೈಯಲು ರೈಲಿನ ಮೂಲಕ ಲಕ್ನೋಗೆ ಬಂದಿದ್ದರು. ಅಲ್ಲಿ ಯೋಜನೆ ರೂಪಿಸಿ ಚಾರ್ಗಾಡ್ ರೈಲ್ವೇ ನಿಲ್ದಾಣದಲ್ಲಿ ಸೇರಿದ್ದರು. ನಂತರ ತಿವಾರಿ ಮನೆ ಮತ್ತು ಆತನ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿದ್ದರು.
ಕಮಲೇಶ್ ತಿವಾರಿ ಇರುವ ಸ್ಥಳದ ಬಗ್ಗೆ ಗೂಗಲ್ ಮ್ಯಾಪ್ ನಲ್ಲಿ ಮಾಹಿತಿ ಪಡೆದಿದ್ದ ಹಂತಕರು ಹತ್ಯೆಗೆ ಸ್ಕೆಚ್ ಹಾಕಿದ್ದರು. ಗೂಗಲ್ ಮ್ಯಾಪ್ ಬಳಸಿ ಹಂತಕರು ಖರ್ಷೇದ್ ಭಾಗ್ ಗೆ ತಲುಪಿದ್ದರು.
ತಿವಾರಿ ಕೊಲೆ ಹಂತಕರನ್ನು ಹಿಡಿಯಲು 10 ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.