ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಸಾಂತ್ವನ ಹೇಳುವವರೆಗೂ ಶುಕ್ರವಾರ ಬರ್ಬರವಾಗಿ ಹತ್ಯೆಗೀಡಾದ ಹಿಂದೂ ಸಮಾಜ್ ಪಕ್ಷದ ಮುಖಂಡ ಕಮಲೇಶ್ ತಿವಾರಿಯ ಅಂತ್ಯಕ್ರೀಯೆ ಮಾಡುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಲಕ್ನೋದ ಖುರ್ಷಿದ್ ಬಾಗ್ ನಲ್ಲಿರುವ ಹಿಂದೂ ಸಮಾಜ್ ಪಕ್ಷದ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಗಳು ಹಾಡಹಗಲೇ ಪಕ್ಷದ ಮುಖಂಡ ಕಮಲೇಶ್ ತಿವಾರಿಗೆ ಗುಂಡು ಹಾರಿಸಿ, ನಂತರ ಕತ್ತನ್ನು ಸೀಳಿ ಆರೋಪಿಗಳು ಓಡಿಹೋಗಿರುವ ಘಟನೆ ನಡೆದಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಆದರೇ ಯೋಗಿ ಅದಿತ್ಯನಾಥ್ ಭೇಟಿ ನೀಡಿ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಪ್ರಾಣತ್ಯಾಗ ಮಾಡುವುದಾಗಿ ಕಮಲೇಶ್ ತಿವಾರಿ ಪತ್ನಿ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಕಮಲೇಶ್ ತಿವಾರಿ ಪತ್ನಿ ಅನುಮಾನದ ಆಧಾರದ ಮೇಲೆ ಇಬ್ಬರು ಮೌಲ್ವಿಗಳ ಮೇಲೆ ದೂರು ದಾಖಲಿಸಿದ್ದಾರೆ. ಶುಕ್ರವಾರ 12:30 ವೇಳೆಗೆ ನನ್ನ ಪತಿ ಕಚೇರಿಯಲ್ಲಿ ಕುಳಿತು ಫೋನ್ ನಲ್ಲಿ ಮಾತನಾಡುತ್ತಿದ್ದರು. ನಾನು ಪಕ್ಕದ ರೂಂನಲ್ಲಿ ಕುಳಿತಿದ್ದೆ. ಅವರು ಮಾತನಾಡುವುದನ್ನು ತಕ್ಷಣ ನಿಲ್ಲಿಸಿದ್ದರಿಂದ ಏನಾಯಿತೆಂದು ವಿಚಾರಿಸಲು ಬಂದಾಗ ಅವರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಆ ವೇಳೆ ಇಬ್ಬರು ವ್ಯಕ್ತಿಗಳನ್ನು ಅವರನ್ನು ಭೇಟಿಯಾಗಲು ಬಂದಿದ್ದರು. ಮೌಲ್ವಿಗಳಂತೆ ಕಾಣುತ್ತಿದ್ದರು ಎಂದಿದ್ದಾರೆ.
2016 ರಲ್ಲಿ ಮಹಮ್ಮದ್ ಮುಫ್ತಿ ನಯಿಮ್ ಕಜ್ಮಿ ಮತ್ತು ಇಮಾಮ್ ಮೌಲಾನ ಅನ್ವರುಲ್ ಹಕ್ ಎಂಬಿಬ್ಬರು ಮೌಲ್ವಿಗಳು ನನ್ನ ಪತಿಯ ತಲೆಗೆ 1.5 ಕೋಟಿಯ ಬೆಲೆ ಕಟ್ಟಿದ್ದರು. ಅವರು ನನ್ನ ಪತಿಯನ್ನು ಪಿತೂರಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ನಡೆಸುತ್ತಿದ್ದಾರೆ.