Advertisement

ಕಂಬಳಕ್ಕೆ ಕಾನೂನು ಮಾನ್ಯತೆ 

06:50 AM Feb 14, 2017 | |

ಬೆಂಗಳೂರು: ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳ, ಹೋರಿಗಳ ಓಟ, ಎತ್ತಿನ ಗಾಡಿ ಸ್ಪರ್ಧೆ ಆಚರಣೆಗೆ ಕಾನೂನು ಮಾನ್ಯತೆ ದೊರಕಿಸಿಕೊಡುವ ಉದ್ದೇಶದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು. 

Advertisement

ಮಂಗಳವಾರ ವಿಧಾನಪರಿಷತ್‌ನಲ್ಲಿ ಈ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ನಿರ್ಧರಿಸಿದೆ. ಕಂಬಳಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವುದು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸುವ ಸಾಂಪ್ರದಾಯಿಕ ಸ್ಪರ್ಧೆಗಳಿಗೆ ಅಧಿಕೃತ ಅನುಮತಿ ನೀಡುವ ಉದ್ದೇಶದ ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ವಿಧೇಯಕ-2017 ಕ್ಕೆ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ಪಶುಸಂಗೋಪನೆ ಸಚಿವ ಎ.ಮಂಜು ವಿಧೇಯಕ ಮಂಡಿಸಿ, ಕಂಬಳ, ಹೋರಿಗಳ ಓಟ, ಎತ್ತಿನ ಗಾಡಿ ಓಟದ ಸ್ಪರ್ಧೆಗಳು ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಕಲೆಗಳಾಗಿದ್ದು, ಅವುಗಳನ್ನು ಉಳಿ
ಸುವ ನಿಟ್ಟಿನಲ್ಲಿ ಈ ವಿಧೇಯಕಕ್ಕೆ ಅನುಮೋದನೆ ನೀಡಲು ಮನವಿ ಮಾಡಿದರು.

ಬಿಜೆಪಿಯ ಸುನಿಲ್‌ಕುಮಾರ್‌, “”ತಮಿಳುನಾಡಿನ ಜಲ್ಲಿಕಟ್ಟು ಮತ್ತು ತುಳುನಾಡಿನ ಕಂಬಳ ಕ್ರೀಡೆಗೂ ಸಾಮ್ಯತೆ ಇರುವ ರೀತಿಯಲ್ಲಿ ಎಲ್ಲರೂ ಮಾತನಾಡುತ್ತಾರೆ. ಆದರೆ, ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಹೋಲಿಕೆ ಮಾಡಲಾಗಲ್ಲ. ಡಿಸೆಂಬರ್‌ ತಿಂಗಳಿಂದ ಇದುವರೆಗೆ 15 ಕಂಬಳ ನಿಂತುಹೋಗಿದೆ. ಈ ವಿಧೇಯಕದ ನಂತರ ಅಂದರೆ, ಮುಂದಿನ ಶನಿವಾರ-ಭಾನುವಾರದಿಂದ ಕಂಬಳ ನಡೆಸಬಹುದೇ ? ಹೈಕೋರ್ಟ್‌ನಲ್ಲಿ ಕಂಬಳ ಕ್ರೀಡೆಗಿರುವ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ” ಎಂದು ಪ್ರಶ್ನಿಸಿದರು. ಶಾಸಕ ಅಭಯಚಂದ್ರ ಜೈನ್‌, “”ಈಗಾಗಲೇ ಕಂಬಳದ ಅವಧಿ ಮುಗಿಯುತ್ತಾ ಬಂದಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಅಷ್ಟೂ ಕಂಬಳಗಳನ್ನು ಪೂರೈಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕು” ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ  ವಿನಯಕುಮಾರ್‌ ಸೊರಕೆ, “”ಕೋಣಗಳು ಕಠಿಣ ಪ್ರಾಣಿಗಳು. ಇಲ್ಲಿ ಹಿಂಸೆಯ ಮಾತಿಲ್ಲ. ಕಂಬಳ ಕ್ರೀಡೆಗಳು ಸೌಹಾರ್ದತೆಯ ಕೂಟವಿದ್ದಂತೆ. ಕೊಂಚ ಪ್ರಚಾರದ ಕೊರತೆಯಾಗಿದೆ” ಎಂದರು. 

ಕಾಂಗ್ರೆಸ್‌ನ ಮೊಯಿದ್ದೀನ್‌ ಬಾವಾ ಬೆಂಬಲಿಸಿ, “”ಜಾತಿಗಳನ್ನು ಒಂದುಗೂಡಿಸುವ ಕ್ರೀಡೆ” ಎಂದು ಬಣ್ಣಿಸಿದರು. ಬಿಜೆಪಿಯ ಎಸ್‌.ಸುರೇಶಕುಮಾರ್‌ ಮಾತನಾಡಿ, “”ಕಳೆದ 1 ತಿಂಗಳಿಂದ ಕಂಬಳದ ಪರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ
ಆಗಿದೆ. ಕುದುರೆ ರೇಸ್‌ನ್ನು ಲಕ್ಷಾಂತರ ರೂ. ಕೊಟ್ಟು ನೋಡುವ ಮಂದಿಯಿದ್ದಾರೆ. ಅದು ಜೂಜು ಎಂದು ಗೊತ್ತಿದ್ದೂ ಅದಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಆದರೆ, ಕಂಬಳದಂತಹ ಕ್ರೀಡೆಯನ್ನು ನಿಷೇಧಿಸುತ್ತೇವೆ. ಇಲ್ಲಿಯೂ ಕೋರ್ಟ್‌ ವ್ಯಾಪ್ತಿ ಮೀರಿ ಕೆಲಸ ಮಾಡುತ್ತದೆ ಎಂಬುದಕ್ಕೆ ನಿದರ್ಶನವಿದೆ. ಸಾಧ್ಯವಾದಷ್ಟು ಬೇಗ ಕಂಬಳ ನಡೆಸಲು ಅನುಮತಿ ಸಿಗುವಂತಾಗಬೇಕು” ಎಂದು ಒತ್ತಾಯಿಸಿದರು. ಬಿಜೆಪಿಯ ಗೋವಿಂದ ಕಾರಜೋಳ, “”ನಮ್ಮ ಕಡೆ ನಡೆಯುವ ಟಗರು ಓಟ, ಕೋಳಿ ಕಾಳಗ, ನಾಯಿಗಳ ಓಟಕ್ಕೂ
ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದರು. ಕೆಜೆಪಿಯ ಬಿ.ಆರ್‌. ಪಾಟೀಲ್‌, ದೇವರು ಮತ್ತು ಧರ್ಮದ
ಹೆಸರಿನಲ್ಲಿ ಪ್ರಾಣಿಹಿಂಸೆ ಮಾಡಬಾರದು ಎಂದು ಹೇಳಿದರು. ಇದಕ್ಕೆ ಕರಾವಳಿ ಭಾಗದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಕಂಬಳಕ್ಕೆ ಮೊದಲು ಅನುಮತಿ ಸಿಗಲಿ ಎಂದು ಒತ್ತಾಯಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಕಾರಜೋಳ, ಬಿ.ಆರ್‌.ಪಾಟೀಲ್‌, ನಾವು ಕಂಬಳ ವಿರೋಧಿಗಳಲ್ಲ. ಆದರೆ, ರಾಜ್ಯದ ಇತರೆ ಭಾಗದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಕ್ರೀಡೆಗಳಿಗೂ ಅನುಮತಿ ಸಿಗಲಿ ಎಂದರು. ಜೆಡಿಎಸ್‌ನ ವೈ.ಎಸ್‌.ವಿ.ದತ್ತಾ, ಮೌಡ್ಯ ನಿಷೇಧ ಕಾಯ್ದೆ ಬಗ್ಗೆಯೂ ಚರ್ಚೆಯಾಗಬೇಕು ಎಂದು ಹೇಳಿದರು.

ಕಂಬಳದ ಕೋಣಗಳು ಒಲಂಪಿಕ್‌ ಗೆ ಹೋದರೆ ಪದಕ ಗ್ಯಾರಂಟಿ. ಆದರೆ ಅವುಗಳನ್ನು ಕಳಹಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. 

Advertisement

ಸಿ.ಟಿ.ರವಿ, ಬಿಜೆಪಿ 

ಪ್ರಾಣಿ ಹಿಂಸೆ ಎಂಬುದೇ ದೊಡ್ಡ ಗೊಂದಲವಾಗಿ ಬಿಟ್ಟಿದೆ. ನಮ್ಮಲ್ಲಿ ಕಂಬಳದ ಕೋಣಗಳಿಗೆ ರಾಜ ಮರ್ಯಾದೆ ಇದೆ. ಮುದ್ದಾಗಿ ಅವುಗಳನ್ನು ಸಾಕಲಾಗುತ್ತದೆ. ಮನೆತನದ ಗೌರವವನ್ನೂ ಅವು ಉಳಿಸುತ್ತವೆ.
ಶಕುಂತಲಾ ಶೆಟ್ಟಿ, ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next