ದಾವಣಗೆರೆ: ರಾಜ್ಯ ಸರ್ಕಾರ ಕರಾವಳಿ ಭಾಗದ ಪಾರಂಪರಿಕ ಸ್ಪರ್ಧೆ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಅನುಮತಿ ನೀಡಿ, ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ, ಯಕ್ಷರಂಗ, ದಾವಣಗೆರೆ- ಚಿತ್ರದುರ್ಗ ಬಂಟರ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಾಣಿದಯಾ ಸಂಘದ ಅರ್ಜಿಯ ಮೇರೆಗೆ ಕರಾವಳಿ ಭಾಗದ ಜನರ ಉಸಿರಾಗಿರುವ ಕಂಬಳ ಸ್ಪರ್ಧೆಯನ್ನು ರಾಜ್ಯ ಉತ್ಛ ನ್ಯಾಯಾಲಯ ನಿಷೇಧಿಸಿದೆ. ಕಂಬಳದ ಬಗ್ಗೆ ಪ್ರಾಣಿದಯಾ ಸಂಘಕ್ಕೆ ಸೂಕ್ತ ಮಾಹಿತಿಯೇ ಇಲ್ಲ. ಕಂಬಳದಲ್ಲಿ ಯಾವುದೇ ರೀತಿಯಲ್ಲಿ ಕೋಣಗಳನ್ನು ಹಿಂಸೆ ಮಾಡುವುದೇ ಇಲ್ಲ. ಕೋಣದೊಟ್ಟಿಗೆ ಜನರು ಓಡುತ್ತಾರೆ.
ನವಂಬರ್‌ನಿಂದ 5 ತಿಂಗಳ ಕಾಲ ನಡೆಯುವಂಥಹ ಕಂಬಳದಲ್ಲಿ ಸ್ಪರ್ಧೆಳಿಯುವಂಥಹ ಪ್ರತಿ ಕೋಣವನ್ನು ಅತ್ಯಂತ ಜೋಪಾನ, ಜಾಗ್ರತೆಯಿಂದ ಸಾಕಲಾಗುತ್ತದೆ. ಇಷ್ಟಕ್ಕೂ ಕಂಬಳ ಹಿಂಸೆಯ ಕ್ರೀಡೆಯಲ್ಲ. ಸೌಮ್ಯದ ಕೀಡೆ. ಹಾಗಾಗಿ ರಾಜ್ಯ ಸರ್ಕಾರ ಕರಾವಳಿ ಭಾಗದ ಪಾರಂಪರಿಕ ಸ್ಪರ್ಧೆ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಅನುಮತಿ ನೀಡಿ, ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತಾಪಿ ವರ್ಗದವರು ಭತ್ತದ ಕೊಯ್ಲಿನ ನಂತರ ಮನೋರಂಜನೆಗೋಸ್ಕರ ನಡೆಸುವಂಥಹ ಗ್ರಾಮೀಣ ಕ್ರೀಡೆ. ಕೃಷಿ ಚಟುವಟಿಕೆಯ ಭಾಗವಾಗವೇ ಆಗಿರುವ ಕೋಣಗಳನ್ನು ಬಳಸಲಾಗುತ್ತದೆ. ಕರಾವಳಿ ಭಾಗದವರು ಕಂಬಳದೊಂದಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಭಾವನಾತ್ಮಕ ನಂಟು ಹೊಂದಿದ್ದಾರೆ. ಜನರ ಭಾವನೆ ಅರ್ಥ ಮಾಡಿಕೊಂಡು ಕಂಬಳಕ್ಕೆ ಮತ್ತೆ ಎಂದಿನಂತೆ ಅವಕಾಶ ಮಾಡಿಕೊಡಬೇಕು. ಇದಕ್ಕೆ ಅಗತ್ಯವಾಗಿರುವ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಕೂಡಲೇ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕಂಬಳದಲ್ಲಿ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂದು ಪ್ರಾಣಿದಯಾ ಸಂಘದವರು ಮಾಡವಂಥಹ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೋಣಗಳನ್ನು ಹಿಂಸೆ ಮಾಡಲಾಗುತ್ತದೆ ಎಂದು ಹೇಳುವಂಥಹ ಪ್ರಾಣಿದಯಾ ಸಂಘದವರು ಕುದುರೆ ರೇಸ್ ನಿಷೇಧಕ್ಕೆ ಯಾಕೆ ಒತ್ತಾಯಿಸುವುದಿಲ್ಲ. ಜನರ ಜೀವನದ ಭಾಗವೇ ಆಗಿರುವ ಗ್ರಾಮೀಣ ಕ್ರೀಡೆಗಳಿಗೆ ಅಡ್ಡಿ ಉಂಟು ಮಾಡುವ ಕೆಲಸ ಯಾರೂ ಕೂಡಾ ಮಾಡಬಾರದು ಎಂದು ಒತ್ತಾಯಿಸಿದರು.
ವೇದಿಕೆ ರಾಜ್ಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಅಮ್ಜದ್ ಅಲಿ, ಶ್ರೇಯಸ್, ರಾಮಪ್ಪ ತೆಲಗಿ, ಹನುಮೇಶ್, ಸುನೀತಾಸಿಂಗ್, ಲಕ್ಷ್ಮಣರಾವ್ ಸಾಳಂಕಿ, ಯಕ್ಷರಂಗದ ಸಾಲಿಗ್ರಾಮ ಗಣೇಶ ಶೆಣೈ, ಕೆ.ಎಚ್. ಮಂಜುನಾಥ್, ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಬಂಟರ ಸಂಘದ ಮಲ್ಯಾಡಿ ಪ್ರಭಾಕರಶೆಟ್ಟಿ, ಕರುಣಾಕರಶೆಟ್ಟಿ, ಕೇಶವಶೆಟ್ಟಿ,ಕೆ. ರಾಘವೇಂದ್ರ ನಾಯರಿ, ಶ್ರೀಧರ್, ಕಿಶನ್‌ಶೆಟ್ಟಿ, ಮಹೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಮಹೇಶ್ ಆರ್. ಶೆಟ್ಟಿ, ಅನಿಲ್ ಬಾರೆಂಗಳ್, ಯೋಗೀಶ್ ಭಟ್, ಮೋತಿ ಆರ್. ಪರಮೇಶ್ವರ್, ಎಂ.ಜಿ. ಶ್ರೀಕಾಂತ್, ಎ. ನಾಗರಾಜ್, ಶ್ರೀಕಾಂತ್ ಬಗೆರಾ ಇತರರು ಇದ್ದರು.