Advertisement

ಕಂಬಳ: ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

06:25 AM Nov 07, 2017 | Team Udayavani |

ಮಂಗಳೂರು: ಕರಾವಳಿ ಸಹಿತ ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಈ ಕುರಿತ ಪ್ರಕರಣದ ಅರ್ಜಿ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಈ ಮೂಲಕ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆಗೆ ತಲೆದೋರಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

Advertisement

ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿರುವ ಸರಕಾರದ ಅಧ್ಯಾದೇಶ ಪ್ರಶ್ನಿಸಿ ಪ್ರಾಣಿದಯಾ ಸಂಘವಾದ ಪೆಟಾ (ಪೀಪಲ್‌ ಫಾರ್‌ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್ಸ್‌) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ನ್ಯಾಯಪೀಠ ಕಂಬಳ ಆಯೋಜನೆಗೆ ತಡೆಯಾಜ್ಞೆ  ನೀಡಲು ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್‌ ಜಾರಿ ಮಾಡಲು ಸೂಚಿಸಿದೆ. 

ಕಂಬಳಕ್ಕೆ ಅವಕಾಶ ನೀಡಿದ ಕ್ರಮ ಸರಿಯಲ್ಲ. ಅದು ಕಾನೂನು ವಿರುದ್ಧ ಎಂದು ಆರೋಪಿಸಿ ಪೆಟಾದ ಪರವಾಗಿ ಮಣಿಲಾಲ್‌ ವಲ್ಲಿಯಕಟ್ಟೆ  ಅವರು ಸುಪ್ರೀಂಗೆ ಸೆ.22ರಂದು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಸರಕಾರದ ಪರಿಸರ, ಅರಣ್ಯ ಸಚಿವಾಲಯದ ಕಾರ್ಯದರ್ಶಿ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕಾರ್ಯದರ್ಶಿ (ಚೆನ್ನೈ) ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು. 

ಸದ್ಯಕ್ಕೆ ಆತಂಕ ದೂರ: ಜಿಲ್ಲಾ ಕಂಬಳ ಸಮಿತಿ ಈಗಾ ಗಲೇ ಕಂಬಳ ಆಯೋಜನೆಗೆ ವೇಳಾಪಟ್ಟಿ ಪ್ರಕಟಿಸಿದೆ. ನ.11ರಂದು ಮೂಡಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಮೊದಲ ಕಂಬಳ ನಡೆಯಲಿದೆ. ಆ ಮೂಲಕ ವಿಜಯೋತ್ಸವ ಆಚರಿಸುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಪೆಟಾದ ಅರ್ಜಿಯನ್ನು ನ.6ರಂದು ಸುಪ್ರೀ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ಅನಿಶ್ಚಿತ ಪರಿಸ್ಥಿತಿ ತಲೆದೋರಿತ್ತು.

Advertisement

ಕಂಬಳ ನಡೆಸಲು ಅವಕಾಶ ನೀಡಿ ಈಗಾಗಲೇ ರಾಷ್ಟ್ರಪತಿಯವರು ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಆ.20ರಂದು ಇದರ ಅಧಿಸೂಚನೆಯಾಗಿದ್ದು 2018 ಜ. 20ರವರೆಗೆ ಈ ಅಧ್ಯಾದೇಶ ಊರ್ಜಿತದಲ್ಲಿರುತ್ತದೆ. ಇದರ ನಡುವೆ ಕಂಬಳ ಆಯೋಜನೆಗೆ ಕಾನೂನು ರೂಪಿಸುವ ಮಸೂದೆ ಮತ್ತೆ ವಿಧಾನಸಭೆಯಲ್ಲಿ ಅನುಮೋದನೆಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾಯೊìàನ್ಮುಖವಾಗಿದ್ದು ಮಸೂದೆಗೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿ ಅನುಮೋದನೆಗೊಳ್ಳುವ ನಿರೀಕ್ಷೆಯೂ ಇದೆ.

ಪ್ರತಿವಾದಿಯಾಗಿ ಪರಿಗಣಿಸಲು ಅರ್ಜಿ
ಪೆಟಾದವರ ಅರ್ಜಿ ವಿಚಾರಣೆ ವೇಳೆ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಮುಂದಾಗಿದೆ. ಈ ಬಗ್ಗೆ  ಸಮಿತಿ ಸಂಜಯ್‌ ಲುಲಿ ಅವರನ್ನು ನ್ಯಾಯವಾದಿಯಾಗಿ ನೇಮಿಸಿದ್ದು ಅವರು ಶೀಘ್ರ ಅರ್ಜಿ ಸಲ್ಲಿಸಲಿದ್ದಾರೆ. ಕಂಬಳಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿರುವುದು ಸಂತಸ ತಂದಿದೆ ಎಂದು ಈ ಸಮಿತಿ ಅಧ್ಯಕ್ಷ  ಹಾಗೂ ಕಂಬಳದ ಬಗ್ಗೆ ನಿರಂತರ ಕಾನೂನು ಸಮರ ನಡೆಸುತ್ತಿರುವ ಅಶೋಕ್‌ ರೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next