ಕರಾವಳಿಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಜನಪದ ಕ್ರೀಡೆಗಳಲ್ಲಿ ಕಂಬಳ ಕೂಡಾ ಒಂದು. ಈ ಕಂಬಳಕ್ಕೆ ಅದರದ್ದೇ ಆದ ವೈಶಷ್ಟ್ಯತೆ, ಪಾವಿತ್ರ್ಯತೆ ಇದೆ. ಈಗ ಆ ಕಂಬಳ ಸಿನಿಮಾ ಮಂದಿಯ ಕಣ್ಣಿಗೆ ಬಿದ್ದಿದೆ. ಅದೇ ಕಾರಣದಿಂದ ಕನ್ನಡ ಹಾಗು ತುಳು ಭಾಷೆಯಲ್ಲಿ ಕಂಬಳ ಕುರಿತಾದ ಸಿನಿಮಾಗಳು ತಯಾರಾಗುತ್ತಿವೆ. ಕರಾವಳಿ ಮಂದಿಗೆ “ಕಂಬಳ’ದ ಬಗ್ಗೆ ಗೊತ್ತಿತ್ತು. ಆದರೆ, ಅದು ದೊಡ್ಡ ಮಟ್ಟದಲ್ಲಿ ಸಿನಿಮಾ ಮಂದಿಯ ಗಮನ ಸೆಳೆದಿದ್ದು, ಹೊಸ ಕ್ರೇಜ್ ಹುಟ್ಟಿಸಿದ್ದು ಇತ್ತೀಚೆಗೆ ಎಂದರೆ ತಪ್ಪಲ್ಲ. ಅದರಲ್ಲೂ “ಕಾಂತಾರ’ದಲ್ಲಿ ನಟ ರಿಷಭ್ ಶೆಟ್ಟಿ ಕಂಬಳ ಕೋಣ ಓಡಿಸುವ ಮಾಸ್ ದೃಶ್ಯವೊಂದು ಸಿನಿಮಂದಿಯ ಗಮನ ಸೆಳೆದಿದ್ದು ಸುಳ್ಳಲ್ಲ. ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಹೀರೋ ಎಂಟ್ರಿಯ ಮಾಸ್ ದೃಶ್ಯಗಳಿಗಿಂತ ರಿಷಭ್ ಶೆಟ್ಟಿಯ “ಕಂಬಳ’ ಎಂಟ್ರಿ ಹೆಚ್ಚು ಆಕರ್ಷಕವಾಗಿತ್ತು.
ಸದ್ಯ ಕನ್ನಡ ಹಾಗೂ ತುಳುವಿನಲ್ಲಿ ಕಂಬಳ ಕುರಿತಾದ ಸಿನಿಮಾಗಳು ಆಗುತ್ತಿವೆ. ಕನ್ನಡದಲ್ಲಿ “ವೀರ ಕಂಬಳ’, ತುಳುವಿನಲ್ಲಿ “ಬಿರ್ದ್‌ದ ಕಂಬಳ’ ಸಿನಿಮಾಗಳು ತಯಾರಾಗಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇದಲ್ಲದೇ ಪ್ರಜ್ವಲ್ ದೇವರಾಜ್ ನಟನೆಯಲ್ಲೊಂದು ಸಿನಿಮಾ ಬರಲಿದ್ದು, ಆ ಸಿನಿಮಾ ಕೂಡಾ ಕಂಬಳ ಬ್ಯಾಕ್‌ಡ್ರಾಪ್‌ನಲ್ಲೇ ಬರಲಿದೆಯಂತೆ. ಇದಲ್ಲದೇ ಕರಾವಳಿ ಮಂದಿ ಮಾಡುವ ಸಿನಿಮಾದಲ್ಲಿ ಒಂದೆರಡು ದೃಶ್ಯಗಳಾದರೂ ಕಂಬಳದ್ದು ಇದೇ ಇರುತ್ತದೆ.
ʼಬಿರ್ದ್‌ದ ಕಂಬಳ’ ಬಗ್ಗೆ… ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತುಳುವಿನಲ್ಲಿ ” ಬಿರ್ದ್‌ದ ಕಂಬಳ’ ಹಾಗೂ ಕನ್ನಡದಲ್ಲಿ ಅದನ್ನೇ “ವೀರ ಕಂಬಳ’ ಎಂದು ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆ ಹಂತಕ್ಕೆ ಬಂದಿದೆ.
ತಮ್ಮ ಡ್ರೀಮ್ ಪ್ರಾಜೆಕ್ಟ್ ಆದ ” ಬಿರ್ದ್‌ದ ಕಂಬಳ’ ಬಗ್ಗೆ ಮಾತನಾಡುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, “ಈ ಸಿನಿಮಾ ಆಗಲು ಮುಖ್ಯ ಕಾರಣ ಜನಪ್ರಿಯ ವಾರಪತ್ರಿಕೆಯಾದ ತರಂಗ ಎನ್ನಬಹುದು. ಅದರಲ್ಲಿ ಬರುತ್ತಿದ್ದ ಕಂಬಳದ ಕುರಿತಾದ ಬರಹಗಳನ್ನು ನಾನು ಓದುತ್ತಿದ್ದೆ. ಓದುತ್ತಾ ನನಗೆ ಕಂಬಳದ ಬಗ್ಗೆ ಆಸಕ್ತಿ ಬಂತು. “ತರಂಗ’ದ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಲೇಖನಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ತರಂಗದ ಜೊತೆ “ಉದಯವಾಣಿ’ ಪತ್ರಿಕೆ ಕೂಡಾ ನನಗೆ ಸಾಕಷ್ಟು ಬೆಂಬಲ ನೀಡಿತು. ಸಿನಿಮಾ ಮಾಡುವ ಮೊದಲು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ. ಅವರಿಂದ ಕಂಬಳದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು’ ಎನ್ನುತ್ತಾರೆ.
ಭರ್ಜರಿ ತಯಾರಿ “ಬಿರ್ದ್‌ದ ಕಂಬಳ’ ಚಿತ್ರೀಕರಣವನ್ನು ನೈಜವಾಗಿ ಚಿತ್ರೀಕರಿಸಲಾಗಿದೆ. ಇದಕ್ಕಾಗಿ ದೊಡ್ಡ ಕರೆಯನ್ನೇ ಸಿದ್ಧಪಡಿಸಲಾಗಿತ್ತು. ಈ ಕುರಿತು ಮಾತನಾಡುವ ರಾಜೇಂದ್ರ ಸಿಂಗ್ ಬಾಬು, ” ಮೂಡುಬಿದಿರೆ ಬಳಿ ಇದಕ್ಕಾಗಿ ದೊಡ್ಡ ಕಂಬಳದ ಕರೆ ಸಿದ್ಧವಾಯಿತು. ಇಪ್ಪತ್ತು ಜೊತೆ ಕೋಣ, ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ, ಸಹ ಕಲಾವಿದರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಒಂದೊಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನೆಲ್ಲಾ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ. ನಂತರ ಚಿತ್ರೀಕರಣ. ಈ ಚಿತ್ರಕ್ಕೆ ಕಥೆಯೇ ಹೀರೋ. ಅದು ಬಿಟ್ಟರೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ದೇಶ-ವಿದೇಶಗಳಿಂದ ಬೇಡಿಕೆ ಇದೆ. ಈ ಸಿನಿಮಾ ಮೂಲಕ ನಮ್ಮ ಕರಾವಳಿಯ ಸಂಸ್ಕೃತಿಯನ್ನು ಇಡೀ ದೇಶಕ್ಕೆ ಪರಿಚಯಿಸುತ್ತೇವೆ’ ಎನ್ನುತ್ತಾರೆ.
ಚಿತ್ರತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಲಿದೆ. ಕಂಬಳದ ಸುತ್ತ ಪ್ರಜ್ವಲ್ ಚಿತ್ರ ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಂದಿವೆ.
ಇದರ ನಡುವೆಯೇ ಹೊಸ ಹೊಸ ಸಿನಿಮಾಗಳನ್ನು ಪ್ರಜ್ವಲ್ ಒಪ್ಪಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆ ಗುರುದತ್ ಗಾಣಿಗ ನಿರ್ದೇಶನದ ಚಿತ್ರ. ಈ ಹಿಂದೆ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನಿರ್ದೇಶನ ಮಾಡಿರುವ ಗುರುದತ್ ಗಾಣಿಗ ಈಗ ಪ್ರಜ್ವಲ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ, ಇದು ಕಂಬಳ ಕುರಿತಾದ ಸಿನಿಮಾ. ಇಡೀ ಸಿನಿಮಾದ ಮೂಲ ಕಥೆ ಕಂಬಳದ ಸುತ್ತವೇ ಸಾಲಿದೆ. ಕಂಬಳದ ಹಿಂದಿನ ತಯಾರಿ, ಕೋಣಗಳ ಆರೈಕೆ ಜೊತೆಗೆ ಮತ್ತೂಂದು ಕಥೆ ಕೂಡಾ ತೆರೆದುಕೊಳ್ಳುತ್ತದೆಯಂತೆ.
ಈ ಕುರಿತು ಮಾತನಾಡುವ ಗುರುದತ್ ಗಾಣಿಗ, “ಸಿನಿಮಾದ ಕಥೆಯಲ್ಲಿ ಕಂಬಳ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಕಂಬಳದ ಓಟದ ಜೊತೆಗೆ ಮತ್ತೂಂದು ಕಥೆ ಕೂಡಾ ತೆರೆದುಕೊಳ್ಳುತ್ತದೆ’ ಎನ್ನುತ್ತಾರೆ.
ವೈರಲ್ ಆಗಿತ್ತು ಶಿವಣ್ಣ ಪೋಸ್ಟರ್: ನಟ ಶಿವರಾಜ್‌ಕುಮಾರ್ ಅವರು ಕಂಬಳ ಕುರಿತಾದ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. “ವೈರಮುಡಿ’ ಎನ್ನುವ ಸಿನಿಮಾದ ಪೋಸ್ಟರ್ ಕೂಡಾ ವೈರಲ್ ಆಗಿತ್ತು. ಚಂದ್ರಶೇಖರ್ ಬಂಡಿಯಪ್ಪ ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಸಿಕ್ಸ್‌ಪ್ಯಾಕ್‌ನಲ್ಲಿ ಕೋಣ ಓಟಗಾರನ ಗೆಟಪ್‌ನಲ್ಲಿ ಶಿವಣ್ಣ ಪೋಸ್ಟರ್ ಅನ್ನು ಸಿದ್ಧಪಡಿಸಲಾಗಿತ್ತು. ಅಭಿಮಾನಿಗಳು ಈ ಪೋಸ್ಟರ್‌ಗೆ ಫಿದಾ ಆಗಿದ್ದರು. ಆದರೆ, ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯಿತು. ಮುಂದೆ ಆ ಚಿತ್ರ ಆಗುತ್ತಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.