ಬೆಂಗಳೂರು: ಕರಾವಳಿ ಭಾಗದ ಕಂಬಳ ಹಾಗೂ ರಾಜ್ಯದ ವಿವಿಧೆಡೆ ಆಚರಣೆಯಲ್ಲಿರುವ ಎತ್ತಿನ ಓಟ, ಎತ್ತಿನಗಾಡಿ ಓಟ ಸ್ಪರ್ಧೆಗಳಿಗೆ ಸಂಬಂಧಿಸಿದ ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ಮಸೂದೆ-2017ಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ಮಾರ್ಪಾಡು ಮಾಡುವ ತನಗಿದ್ದ ಅಧಿಕಾರವನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ರಾಷ್ಟ್ರಪತಿಯವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೂಲ ಕಾಯ್ದೆಯ ಸೆಕ್ಷನ್-3ರಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದ್ದ ಅಂಶ ವನ್ನು ವಾಪಸ್ ಪಡೆದುಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಕಂಬಳ, ಎತ್ತಿನ ಓಟ, ಎತ್ತಿನಗಾಡಿ ಓಟ ಸ್ಪರ್ಧೆಗೆ ಅವಕಾಶ ಮಾಡಿಕೊಡಲು ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಭವಿಷ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ಅಥವಾ ಸಂದರ್ಭಕ್ಕನುಸಾರವಾಗಿ ಮೂಲ ಕಾಯ್ದೆಯಲ್ಲಿ ಬದಲಾವಣೆ ಅಥವಾ ಮಾರ್ಪಾಡು ಮಾಡಬೇಕಾದ ಪ್ರಮೇಯ ಒದಗಿ ಬಂದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಮಾರ್ಪಾಡು ಅಥವಾ ಬದಲಾವಣೆ ಮಾಡುವ ಅಧಿಕಾರವನ್ನು ರಾಜ್ಯ ಸರಕಾರ ಇಟ್ಟುಕೊಳ್ಳುವ ಸಂಬಂಧ ಕಾಯ್ದೆಯ ಸೆಕ್ಷನ್ 3ರಲ್ಲಿ ಹೆಚ್ಚುವರಿ ಅಂಶವನ್ನು ಸೇರಿಸಲಾಗಿತ್ತು. ಆದರೆ, ರಾಷ್ಟ್ರಪತಿಯವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ಸೇರಿಸಲಾಗಿದ್ದ ಅಂಶವನ್ನು ಕೈಬಿಡಲು ರಾಜ್ಯ ಸರಕಾರ ಒಪ್ಪಿದೆ.
ಅದರಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಯಚಂದ್ರ ತಿಳಿಸಿದರು. ರಾಷ್ಟ್ರಪತಿಯವರ ಸೂಚನೆ ಹಿನ್ನೆಲೆಯಲ್ಲಿ ಕಾಯ್ದೆಯ ಸೆಕ್ಷನ್ 3ರಲ್ಲಿ ಸೇರಿಸಲಾಗಿದ್ದ ಹೆಚ್ಚುವರಿ ಅಂಶವನ್ನು ಕೈಬಿಟ್ಟು ಪರಿಷ್ಕೃತ ಮಸೂದೆಯನ್ನು ಪುನಃ ರಾಷ್ಟ್ರಪತಿಯವರಿಗೆ ಕಳಿಸಿಕೊಡಲಾಗುವುದು.
ರಾಷ್ಟ್ರಪತಿಯವರ ಅಂಕಿತದ ಬಳಿಕ ಕೇಂದ್ರ ಗೃಹ ಇಲಾಖೆಯ ಮೂಲಕ ಮಸೂದೆ ರಾಜ್ಯಪಾಲರಿಗೆ ಬರಲಿದೆ. ರಾಜ್ಯಪಾಲರಿಂದ ಅನುಮೋದನೆ ಪಡೆದ ಬಳಿಕ ಕಾಯ್ದೆ ಜಾರಿಗೆ ಬರಲಿದೆ. ಹೆಚ್ಚುವರಿಯಾಗಿ ಸೇರಿಸಲಾಗಿದ್ದ ಒಂದು ಅಂಶವನ್ನು ಮಾತ್ರ ಕೈಬಿಟ್ಟಿರುವುದರಿಂದ ಅದು ಕಾಯ್ದೆಗೆ ತಿದ್ದುಪಡಿ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಪುನಃ ಕಾಯ್ದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಅವಶ್ಯಕತೆ ಇರುವುದಿಲ್ಲ ಎಂದು ಜಯಚಂದ್ರ ವಿವರಿಸಿದರು.