ಮಂಗಳೂರು: ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸುವ ಸಂಬಂಧ ಕೇಂದ್ರ ಸರಕಾರದ ಮುಂಬರುವ ಮಾರ್ಗಸೂಚಿಗಳನ್ನು ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ, ಕಾಸರಗೊಡು ಜಿಲ್ಲಾ ಕಂಬಳ ಸಮಿತಿಯು ಶುಕ್ರವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಸಚಿವರು ಮಾತನಾಡಿದರು.
ಕಂಬಳ ನಡೆಸಲು ದ.ಕ. ಜಿಲ್ಲಾಡಳಿತವು ಉತ್ಸುಕವಾಗಿದೆ ಮತ್ತು ಸಂಪೂರ್ಣ ಸಹಕಾರ ನೀಡಲಿದೆ. ಆದರೆ ಈ ಬಗ್ಗೆ ಕೇಂದ್ರದ ಮಾರ್ಗಸೂಚಿಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಶ್ರಮಿಸುತ್ತಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆಚರಣೆಗೆ ಅಡ್ಡಿಯಾಗಿದ್ದು, ಸರಕಾರದ ಷರತ್ತು ಪಾಲಿಸಿಕೊಂಡು ಸೀಮಿತ ಕಂಬಳ ಆಚರಣೆಗೆ ಅವಕಾಶ ನೀಡಬೇಕು ಎಂದು ಸಮಿತಿಯು ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಗೌರವಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ, ಪ್ರಧಾನ ಕಾರ್ಯದರ್ಶಿ ಸುಜಿತ್, ಕಂಬಳ ಕೋಣಗಳ ಯಜಮಾನ ಮುಚ್ಚಾರು ಕಲ್ಕುಡ ಲೋಕೇಶ್ ಶೆಟ್ಟಿ, ತಿರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.
ಆಯೋಜನೆಗೆ ಸಹಕಾರ: ನಳಿನ್
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್, ಜಾನಪದ ಕ್ರೀಡೆ ಕಂಬಳದ ಹಿಂದೆ ದೈವಾರಾಧನೆ, ಕೃಷಿ ವೈಭವವಿದ್ದು, ಇದನ್ನು ಪ್ರವಾಸೋದ್ಯಮದ ನೆಲೆಯಲ್ಲೂ ಪರಿಗಣಿಸಲಾಗುತ್ತಿದೆ. ಕರಾವಳಿ ಆರ್ಥಿಕತೆಗೂ ಕಂಬಳ ಸಹಕಾರಿಯಾಗಿದೆ. ಕಂಬಳ ಆಯೋಜನೆ ವಿಚಾರದಲ್ಲಿ ಕಂಬಳ ಸಮಿತಿಗೆ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದರು.