ಬೆಂಗಳೂರು : ಕರ್ನಾಟಕದ ಸಾಂಪ್ರದಾಯಿಕ ಕಂಬಳ ಕ್ರೀಡೆಯ ಮೇಲಿನ ನಿಷೇಧದ ಕುರಿತಾದ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಇಂದು ಸೋಮವಾರ, ಎರಡು ವಾರಗಳ ಮಟ್ಟಿಗೆ ಮುಂದೂಡಿದೆ.
‘ಜಲ್ಲಿಕಟ್ಟು ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮರಳಿ ಕೋರ್ಟಿಗೆ ಬನ್ನಿ’ ಎಂದು ರಾಜ್ಯ ಹೈಕೋರ್ಟ್ ಅರ್ಜಿದಾರರಿಗೆ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ನೆರೆಯ ತಮಿಳು ನಾಡಿನಲ್ಲಿ ಜಲ್ಲಿಕಟ್ಟು ನಿಷೇಧದ ತೆರವಿಗೆ ನಡೆದಿದ್ದ ಬೃಹತ್ ಜನಾಂದೋಲನದ ರೀತಿಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಕಳೆದ ಶನಿವಾರ ಕಂಬಳ ಕ್ರೀಡೆಯ ಮೇಲಿನ ನಿಷೇಧದ ತೆರವಿಗಾಗಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನಕಾರರು ಮೂಡಬಿದಿರೆಯಲ್ಲಿ ಕಂಬಳ ಮೇಲಿನ ನಿಷೇಧದ ಶಾಶ್ವತ ತೆರವು ಆಗ್ರಹಿಸಿ ಬೃಹತ್ ಮೆರವಣಿಗೆಯನ್ನು ನಡೆಸಿದ್ದರು.
ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಕಡಲಕರೆ ಪ್ರದೇಶದ ವರೆಗೆ ಒಂದು ಕಿ.ಮೀ. ಉದ್ದ ಕಂಬಳ ಗದ್ದೆಯಲ್ಲಿ ಪ್ರತಿಭಟನಕಾರರು ಸುಮಾರು 50 ಜೋಡಿ ಕೋಣಗಳನ್ನು ಪ್ರದರ್ಶಿಸಿದ್ದರು.
ಪೇಟಾ ಹೂಡಿದ್ದ ದಾವೆಯ ವಿಚಾರಣೆಯನ್ನು ನಡೆಸಿದ್ದ ರಾಜ್ಯ ಹೈಕೋರ್ಟ್ ಕಳೆದ ನವೆಂಬರ್‌ನಲ್ಲಿ ತಾತ್ಕಾಲಿಕ ಆದೇಶವನ್ನು ಹೊರಡಿಸುವ ಮೂಲಕ ಕಂಬಳ ಕ್ರೀಡೆಯ ಮೇಲೆ ನಿಷೇಧ ಹೇರಿತ್ತು. ಈಗಿನ್ನು ಮುಂದಿನ ಸೋಮವಾರ ಹೈಕೋರ್ಟ್ ವಿಚಾರಣೆ ನಡೆಸಲಿದೆ.