ಬೆಂಗಳೂರು: ಕರಾವಳಿಯ ಕಂಬಳ ಮತ್ತು ಉತ್ತರ ಕರ್ನಾಟಕದ ಹೋರಿಗಳ ಓಟ ಅಥವಾ ಎತ್ತಿನಗಾಡಿ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುವ, ಪ್ರಾಣಿಗಳಿಗೆ ಹಿಂಸಾಚಾರ ಮಾಡು ವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ಅಧ್ಯಾದೇಶ- 2017ಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಲು ಕೇಂದ್ರ ಸರಕಾರದ ನೆರವು ಪಡೆಯಲು ರಾಜ್ಯ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳ ಪೂರ್ವಸೂಚನೆ ಪಡೆಯಲು ಕಳೆದ ಫೆಬ್ರವರಿ ಯಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾದ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಅದೇ ಮಾನದಂಡ ಇಟ್ಟುಕೊಂಡು ಇಲ್ಲಿ ಕಂಬಳವನ್ನು ನಿಷೇಧಿಸಲಾಗಿತ್ತು. ಆದರೆ, ತಮಿಳು ನಾಡು ಸರಕಾರ ಅಧ್ಯಾದೇಶ ಮೂಲಕ ಜಲ್ಲಿಕಟ್ಟುವಿಗೆ ಅನುಮತಿ ನೀಡಿದ್ದಲ್ಲದೆ, ಅನಂತರ ವಿಧಾನಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿತ್ತು.
ಕಳೆದ ಫೆಬ್ರವರಿಯಲ್ಲಿ ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ಅಧ್ಯಾದೇಶ-2017ಕ್ಕೆ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ಇದು ಕೇಂದ್ರ ಕಾಯ್ದೆಗೆ ತಿದ್ದುಪಡಿಯಾಗಿರುವುದ ರಿಂದ ರಾಜ್ಯಪಾಲರು ಅದನ್ನು ರಾಷ್ಟ್ರಪತಿ ಗಳಿಗೆ ಕಳುಹಿಸಿಕೊಟ್ಟಿದ್ದರು. ಕಾಯ್ದೆ ತಿದ್ದುಪಡಿ ಕುರಿತಂತೆ ಕೇಂದ್ರ ಸರಕಾರ ರಾಜ್ಯಕ್ಕೆ ಕೆಲವೊಂದು ಸಲಹೆ ನೀಡಿದ್ದು, ಅದನ್ನು ಪಾಲಿಸುವ ಬಗ್ಗೆ ಕಡತವನ್ನು ಅಡ್ವೊಕೇಟ್ ಜನರಲ್‌ಗೆ ಕಳುಹಿಸಿಕೊಡಲಾಗಿತ್ತು. ಅಡ್ವೊಕೇಟ್ ಜನರಲ್ ಅವರ ಸೂಚನೆಯಂತೆ ಇದೀಗ ಕೇಂದ್ರ ಸರಕಾರಕ್ಕೆ ತಿದ್ದುಪಡಿ ಮಸೂದೆ ಕಳುಹಿಸಿ ಆ ಮೂಲಕ ರಾಷ್ಟ್ರಪತಿಯಿಂದ ಅಂಕಿತ ಪಡೆದುಕೊಳ್ಳಲು ರಾಜ್ಯ ಸರಕಾರ ಮುಂದಾಗಿರುವುದಾಗಿ ತಿಳಿದು ಬಂದಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಮರಳು ಲಭ್ಯವಿರುವ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ಕುರಿತು ಸಚಿವ ಸಂಪುಟ ಉಪಸಮಿತಿ ಸಿದ್ಧಪಡಿಸಿರುವ ‘ಸಿಆರ್‌ಝೆಡ್‌ಯೇತರ ಪ್ರದೇಶದಲ್ಲಿ ವಿಶೇಷ ಮರಳು ನೀತಿ’ ಜಾರಿ ಕುರಿತೂ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.