Advertisement

ಕಂಬಳ ತಡೆಯಾಜ್ಞೆ ತೆರವಿಲ್ಲ

11:50 AM Jan 31, 2017 | Team Udayavani |

ಬೆಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕ್ರೀಡೆ ಕಂಬಳದ ಆಯೋಜನೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ. 

Advertisement

ಇದರೊಂದಿಗೆ ಕಂಬಳ ಮುಂದುವರಿಸಲು ಸರ್ಕಾರ ಕಾಯ್ದೆ ರೂಪಿಸುವವರೆಗೆ ಕಾಯಲೇ ಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಂಬಳ ಸಮಿತಿ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಗೆ ಬಂದಿದ್ದ ಹಿನ್ನೆಲೆಯಲ್ಲಿ ನಿಷೇಧ ತೆರವಾಗುವ ಬಗ್ಗೆ ಆ ಭಾಗದ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.

ಆದರೆ, ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಮತ್ತು ನ್ಯಾ.ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ, ಜಲ್ಲಿಕಟ್ಟು ಕ್ರೀಡೆಯನ್ನು ಕಾನೂನುಬದ್ಧಗೊಳಿಸುವ ಕುರಿತು ತಮಿಳುನಾಡು ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

ಜಲ್ಲಿಕಟ್ಟು ಕ್ರೀಡೆಗೂ ಕಂಬಳವು ಸಾಮೀಪ್ಯ ಇರುವುದರಿಂದ ಈ  ಪ್ರಕರಣದ ವಿಚಾರಣೆ ನಡೆಸಲು ನಾವು ಇಷ್ಟಪಡುವುದಿಲ್ಲ. ಸುಪ್ರೀಂಕೋರ್ಟ್‌ ತೀರ್ಮಾನ ಪ್ರಕಟವಾಗುವವರೆಗೆ ಕಂಬಳ ಕ್ರೀಡೆಗೆ ತಡೆಯಾಜ್ಞೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ವಿಚಾರಣೆ ವೇಳೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಂಬಳ ಸಮಿತಿ ಪರ ವಕೀಲರು ವಾದಿಸಿ, ಕಂಬಳವು ಸಾಂಪ್ರದಾಯಿಕ ಕ್ರೀಡೆಯಾಗಿದೆ.

ರಾಜ್ಯ ಸಚಿವ ಸಂಪುಟವೂ ಕಂಬಳವನ್ನು ಕಾನೂನುಬದ್ಧಗೊಳಿಸಲು ತೀರ್ಮಾನಿಸಿದೆ. ಈಗಾಗಲೇ ಕಂಬಳ ಆಯೋಜನೆಗೆ ಸಿದ್ಧತೆಗಳನ್ನೂ ನಡೆಸಲಾಗಿದೆ. ಹೀಗಾಗಿ, ಕಂಬಳ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೋ ಕಂಬಳ… ನೋ ಕಂಬಳ ಎಂದು ಹೇಳಿ, ಸುಪ್ರೀಂಕೋರ್ಟ್‌ ಆದೇಶ ಹೊರಬೀಳುವವರೆಗೆ ಮಧ್ಯ ಪ್ರವೇಶಿ ಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿತು.

Advertisement

ಪ್ರಕರಣವೇನು?: ರಾಜ್ಯದಲ್ಲಿ ಕಂಬಳ ಆಯೋಜನೆಗೆ ನಿಷೇಧ ಹೇರಿ ಆದೇಶಿಸುವಂತೆ ಕೋರಿ ಪೀಪಲ್‌ ಫಾರ್‌ ಎಥಿಕಲ್‌ ಟ್ರೀಟೆಂಟ್‌ ಆಫ್ ಅನಿಮಲ್ಸ್‌ (ಪೆಟಾ) 2016ರ ಫೆ. 16ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ಮುಗಿಯುವವರೆಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಬಾರದೆಂದು 2016ರ ನ.22ರಂದು ಆದೇಶಿಸಿತ್ತು. ಇದರಿಂದ ಅರ್ಜಿ ಸಲ್ಲಿಸಿ ಕಂಬಳ ಆಯೋಜನೆಗೆ ಅನುಮತಿ ನೀಡುವಂತೆ ಕೋರಲಾಗಿದೆ.

ಹಾಸ್ಯ ಚಟಾಕಿ ಹಾರಿಸಿದ ನ್ಯಾಯಮೂರ್ತಿ
ವಿಚಾರಣೆ ವೇಳೆ ಕಂಬಳ ಸಮಿತಿ ಪರ ವಕೀಲರನ್ನು ಉದ್ದೇಶಿಸಿ ಮುಖ್ಯ ನ್ಯಾ. ಎಸ್‌.ಕೆ.ಮುಖರ್ಜಿ ಅವರು ಲಘು ದಾಟಿಯಲ್ಲಿ ಹೇಳಿದ ಮಾತು ಕೋರ್ಟ್‌ಹಾಲ್‌ನ್ನು ನಗೆಗಡಲಲ್ಲಿ ತೇಲಿಸಿತು. ಕಂಬಳ ಪರ ವಕೀಲರು ವಾದ ಮಂಡಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿಗಳು, “ನಿಮ್ಮನ್ನೂ ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳಂತೆ ಓಡಿಸುತ್ತೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಕೋರ್ಟ್‌ಹಾಲ್‌ನಲ್ಲಿ ನಗೆ ಚಿಮ್ಮಿತು.

Advertisement

Udayavani is now on Telegram. Click here to join our channel and stay updated with the latest news.

Next